ಮಂಗಳೂರು: ಕೊಂಕಣಿ ಕಲೆ, ಸಂಸ್ಕೃತಿ ಹಾಗೂ ಕಲಾವಿದರಿಗೆ ನಿರಂತರ ವೇದಿಕೆ ಕಲ್ಪಿಸುವ ಉದ್ದೇಶದಿಂದ ಮಾಂಡ್ ಸೊಭಾಣ್ ಸಂಸ್ಥೆ ಆರಂಭಿಸಿದ ‘ಮ್ಹಯ್ನ್ಯಾಳಿ ಮಾಂಚಿ’ (ತಿಂಗಳ ವೇದಿಕೆ) ಸರಣಿಯು 300 ತಿಂಗಳ ಯಶಸ್ವಿ ಮೈಲಿಗಲ್ಲನ್ನು ತಲುಪಿದೆ. 25 ವರ್ಷಗಳ ನಿರಂತರ ಪಯಣದ ಮೂಲಕ ವಿವಿಧ ಕೊಂಕಣಿ ಭಾಷಾ ಪ್ರಭೇದಗಳು, ಜನಪದ ಕಲೆಗಳು ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ಪರಿಚಯಿಸುವಲ್ಲಿ ಈ ಸರಣಿ ಮಹತ್ವದ ಕೊಡುಗೆ ನೀಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಲುವಿ ಪಿಂಟೊ ತಿಳಿಸಿದರು.

ನಗರದ ಹೋಟೆಲ್ ಗೋಲ್ಡ್ಫಿಂಚ್ನ ಬ್ಯಾಂಕ್ವೆಟ್ ಹಾಲ್ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಾಂಗಣದಲ್ಲಿ ಕಲೆ ಮತ್ತು ಸಂಸ್ಕೃತಿಯ ನಾದ ನಿರಂತರವಾಗಿ ಅನುರಣಿಸಬೇಕು, ಪ್ರತಿಭೆಗಳಿಗೆ ವೇದಿಕೆ ದೊರೆಯಬೇಕು ಹಾಗೂ ಕೊಂಕಣಿ ಕಲೆಗಳು ಪ್ರಯೋಗ ಮತ್ತು ಪ್ರದರ್ಶನಗಳ ಮೂಲಕ ಜನಮಾನಸ ತಲುಪಬೇಕು ಎಂಬ ಆಶಯದೊಂದಿಗೆ ಈ ಸರಣಿಯನ್ನು ಆರಂಭಿಸಲಾಗಿದೆ ಎಂದರು.

2001ರ ಡಿಸೆಂಬರ್ 1ರಂದು ಪ್ರಸಿದ್ಧ ಹಿಂದಿ ಚಿತ್ರನಟ ನಾಸಿರುದ್ದೀನ್ ಶಾ ಅವರು ಕಲಾಂಗಣದ ಬಯಲು ರಂಗಮಂದಿರವನ್ನು ಉದ್ಘಾಟಿಸಿದ್ದರು. ಬಳಿಕ 2002ರ ಜನವರಿ 6ರಿಂದ ಪ್ರತಿ ತಿಂಗಳ ಮೊದಲ ಭಾನುವಾರ ಸಂಜೆ 6.30ಕ್ಕೆ ತಿಂಗಳ ವೇದಿಕೆ ಕಾರ್ಯಕ್ರಮ ಆರಂಭವಾಯಿತು. ಅಂದಿನಿಂದ ಇಂದಿನವರೆಗೆ ನೃತ್ಯ, ನಾಟಕ, ಸಂಗೀತ ಹಾಗೂ ಜನಪದ ಕಲೆಗಳ ನೂರಾರು ಪ್ರದರ್ಶನಗಳು ನಡೆದಿವೆ.

ತಿಂಗಳ ವೇದಿಕೆ ಸರಣಿಯಲ್ಲಿ ಕೊಂಕಣಿ ಯಕ್ಷಗಾನ, ಮಕ್ಕಳ ರಜಾ ಶಿಬಿರದ ಸೃಜನಶೀಲ ಪ್ರಯೋಗಗಳು, ಕಲಾಕುಲ್ ನಾಟಕ ರೆಪರ್ಟರಿಯ ಪ್ರದರ್ಶನಗಳು, ಗೋವಾದ ತಿಯಾತ್ರ್, ಜಮ್ನಿವೆಲೊ ಖೆಳ್, ದಿವ್ಯಾ ಖೆಳ್, ಘೊಡ್ಯಾ ಮೊಡ್ನಿ, ಜಾಗೊರ್, ಮಾಂಡೊ, ದುಲ್ಪೊದಾಂ ಸೇರಿದಂತೆ ವಿವಿಧ ಕಲಾಪ್ರಕಾರಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಕ್ರೈಸ್ತ, ಜಿಎಸ್ಬಿ, ಕುಡ್ಮಿ, ಖಾರ್ವಿ, ಸಿದ್ದಿ, ದಾಲ್ದಿ ಹಾಗೂ ನವಾಯತಿ ಸಮುದಾಯಗಳ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಪ್ರತಿಬಿಂಬಿಸುವ ಗುಮಟ್, ಚೂಡಿಪುಜಾ, ಉಜ್ಯಾ ಖೆಳ್, ದಮಾಮ್, ಫುಗ್ಡಿ, ತೊಣಿಯೊ, ದೊರಿ ಖೆಳ್, ದಪ್ ಮೊದಲಾದ ಜನಪದ ಕಲೆಗಳಿಗೂ ವೇದಿಕೆ ಒದಗಿಸಲಾಗಿದೆ. ಜ್ಞಾನಪೀಠ ಪುರಸ್ಕೃತರು ಸೇರಿದಂತೆ ಪ್ರಮುಖ ಕೊಂಕಣಿ ಸಾಹಿತಿಗಳ ಕೃತಿಗಳನ್ನು ರಂಗಪ್ರಯೋಗಗಳ ಮೂಲಕ ಪರಿಚಯಿಸುವ ಕಾರ್ಯವೂ ನಡೆದಿದೆ.
ಕಲಾವಿದರಿಗೆ ಸೂಕ್ತ ಗೌರವ ನೀಡುವಲ್ಲಿ ಮಾಂಡ್ ಸೊಭಾಣ್ ವಿಶೇಷ ಕಾಳಜಿ ವಹಿಸಿದೆ. ತಿಂಗಳ ವೇದಿಕೆಗೆ ಆಯ್ಕೆಯಾದ ತಂಡಗಳಿಗೆ ಗೌರವ ಸಂಭಾವನೆ, ದೂರದ ಊರುಗಳಿಂದ ಬರುವ ಕಲಾವಿದರಿಗೆ ಪ್ರಯಾಣ, ವಸತಿ ಹಾಗೂ ಊಟೋಪಚಾರದ ವ್ಯವಸ್ಥೆ ಮಾಡಲಾಗುತ್ತದೆ. ಕಾರ್ಯಕ್ರಮಗಳಿಗೆ ಅಗತ್ಯವಾದ ಧ್ವನಿ, ಬೆಳಕು, ಪ್ರಚಾರ ಹಾಗೂ ಪ್ರೇಕ್ಷಕರ ವ್ಯವಸ್ಥೆಯನ್ನೂ ಸಂಸ್ಥೆ ಕಲ್ಪಿಸುತ್ತಿದೆ.

ಸಂಸ್ಥೆಯ ಸ್ಥಾಪಕ ದಿ. ಎರಿಕ್ ಒಝೇರಿಯೊ ಅವರ ಆಶಯದಂತೆ ಅಧ್ಯಕ್ಷ ಲುವಿ ಪಿಂಟೊ ನೇತೃತ್ವದ ಸಮಿತಿ ಕಲಾಂಗಣವನ್ನು ಕಲಾವಿದರ ಸೃಜನಶೀಲತೆಗೆ ಪೂರಕವಾದ ವೇದಿಕೆಯಾಗಿ ಬೆಳೆಸುತ್ತಿದೆ.
ತಿಂಗಳ ವೇದಿಕೆ ಸರಣಿಯ 300ನೇ ಕಾರ್ಯಕ್ರಮವಾಗಿ ಡಿಸೆಂಬರ್ 6ರಂದು ಸಂಜೆ 6 ಗಂಟೆಗೆ ಕಲಾಂಗಣ ಮೈದಾನದಲ್ಲಿ ‘ದಿ ಗ್ರೇಟ್ ಬಾಯ್ಲಾ ಇಂಟರ್ನ್ಯಾಶನಲ್ ಶೋ’ ಆಯೋಜಿಸಲಾಗಿದೆ.
ಬಾಯ್ಲಾ ಹಾಡುಗಳು ಮತ್ತು ನೃತ್ಯಗಳು ಕೊಂಕಣಿ ಸಂಸ್ಕೃತಿಯ ಪ್ರಮುಖ ಅಸ್ಮಿತೆಯಾಗಿವೆ. ಪೋರ್ಚುಗೀಸ್ನ ‘ಬಾಯ್ಲಾದು’ ಎಂಬ ಪದದಿಂದ ಬಂದಿರುವ ಬಾಯ್ಲಾ ಎಂದರೆ ನರ್ತಿಸು ಎಂದರ್ಥ. ದುಲ್ಪದ್ ಮತ್ತು ಪೊಲ್ಕಾ ನೃತ್ಯ ಪ್ರಕಾರಗಳಿಂದ ರೂಪುಗೊಂಡ ಬಾಯ್ಲಾ ಕಲೆಯನ್ನು ಮಾಂಡ್ ಸೊಭಾಣ್ ವಿವಿಧ ಕಾರ್ಯಕ್ರಮಗಳ ಮೂಲಕ ಜನಪ್ರಿಯಗೊಳಿಸಿದೆ.
ವಿಶ್ವದ ಪ್ರಥಮ ಬಾಯ್ಲಾ ಶೋ, ಬಿಗ್ ಬಾಯ್ಲಾ ಶೋ, ಬಾಯ್ಲಾ ಕಾರ್ನಿವಲ್, ಬಾಯ್ಲಾ ಫೆಸ್ಟಿವಲ್, ಬಾಯ್ಲಾ ಅರೇಬಿಯಾ, ಲಿಯೊ ಬಾಯ್ಲಾ ಶೋ ಹಾಗೂ ಬಾಯ್ಲಾ ನೃತ್ಯ ಸ್ಪರ್ಧೆಗಳ ಮೂಲಕ ಈ ಕಲಾಪ್ರಕಾರವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ. ಭಾರತ ಮಾತ್ರವಲ್ಲದೆ ಶ್ರೀಲಂಕಾ, ಮಾರಿಷಸ್ ಹಾಗೂ ಲ್ಯಾಟಿನ್ ಅಮೆರಿಕದ ದೇಶಗಳಲ್ಲಿಯೂ ಬಾಯ್ಲಾ ಪ್ರಕಾರ ಜನಪ್ರಿಯವಾಗಿದೆ.

ದುಬೈಯ ಪ್ರಖ್ಯಾತ ಗಿಟಾರ್ ಮಾಸ್ಟ್ರೋ ಆಲ್ವಿನ್ ಫೆರ್ನಾಂಡಿಸ್ ಕಾರ್ಯಕ್ರಮವನ್ನು ನಿರ್ದೇಶಿಸಲಿದ್ದು, ಶ್ರೀಲಂಕಾದ ಅಂತರರಾಷ್ಟ್ರೀಯ ಖ್ಯಾತಿಯ ‘ಎಲ್ಲೋ ಬೀಟ್ಸ್’ ತಂಡ ಸಂಗೀತ ಕಾರ್ಯಕ್ರಮ ನೀಡಲಿದೆ. ಹಳೆಯ ಜನಪ್ರಿಯ ಬಾಯ್ಲಾ ಹಾಡುಗಳ ಜೊತೆಗೆ ಈ ಕಾರ್ಯಕ್ರಮಕ್ಕಾಗಿಯೇ ರಚಿಸಲಾದ ಹೊಸ ಹಾಡುಗಳು ಪ್ರೇಕ್ಷಕರನ್ನು ರಂಜಿಸಲಿವೆ.
ನಾಚ್ ಸೊಭಾಣ್ ಮತ್ತು ಅರ್ಬನ್ ಗ್ರೂವ್ ತಂಡಗಳಿಂದ ನೃತ್ಯ ಪ್ರದರ್ಶನ ನಡೆಯಲಿದೆ. ಯುವಜನರು ಹಾಗೂ ನೃತ್ಯಾಸಕ್ತರಿಗಾಗಿ ವಿಶೇಷ ನೃತ್ಯ ವೇದಿಕೆ ಇರಲಿದೆ. ವೆಂಜ್ ಮಾಡೆಲಿಂಗ್ ಅಕಾಡೆಮಿಯ ವಿದ್ಯಾರ್ಥಿಗಳು ಕೊಂಕಣಿ ಸಾಂಪ್ರದಾಯಿಕ ಉಡುಗೆಗಳ ಫ್ಯಾಷನ್ ವಾಕ್ ಹಾಗೂ ನೃತ್ಯ ಪ್ರದರ್ಶಿಸಲಿದ್ದಾರೆ.
ಬೆಂಗಳೂರಿನ ಉದ್ಯಮಿ ಹಾಗೂ ದಾನಿ ಆಸ್ಟಿನ್ ರೋಚ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತ ಪ್ರವೇಶವಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾಂಡ್ ಸೊಭಾಣ್ ನ ಅಧ್ಯಕ್ಷರಾದ ಲುವಿ ಪಿಂಟೊ, ದಿ ಗ್ರೇಟ್ ಬಾಯ್ಲಾ ಇಂಟರ್ ನ್ಯಾಶನಲ್ ಶೋನ ನಿರ್ದೇಶಕರಾದ ಆಲ್ವಿನ್ ಫೆರ್ನಾಂಡಿಸ್, ಕಲಾಂಗಣ ಪಿರ್ಜೆಂತ್ ರೊಯ್ ಕ್ಯಾಸ್ತೆಲಿನೊ, ಮಾಂಡ್ ಸೊಭಾಣ್ ನ ಸಂಘಟಕರಾದ ಸ್ಟ್ಯಾನಿ ಆಲ್ವಾರಿಸ್, ಮಾಂಡ್ ಸೊಭಾಣ್ ನ ಕಾರ್ಯದರ್ಶಿ ರೊನಾಲ್ಡ್ ಕ್ರಾಸ್ತಾ, ಮಾಂಡ್ ಸೊಭಾಣ್ ನ ಉಪಾಧ್ಯಕ್ಷರಾದ ನವೀನ್ ಲೋಬೊ ಹಾಗೂ ಮಾಂಡ್ ಸೊಭಾಣ್ ಖಜಾಂಜಿ ಎಲ್ರೊನ್ ರೊಡ್ರಿಗಸ್ ಉಪಸ್ಥಿತರಿದ್ದರು.


