ಉಡುಪಿ: 2002ರ ಮನೋಹರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ, ಭೂಗತ ಲೋಕದ ಪಾತಕಿ ಕಲಿ ಯೋಗೀಶ್ನ ಸಹಚರ ರಾಜೇಶ್ ಕೇಶವ ಆಚಾರ್ಯ ಅವರನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಯಿಂದ ಭಾರತಕ್ಕೆ ಗಡೀಪಾರು ಮಾಡಲಾಗಿದೆ. ಶುಕ್ರವಾರ (ನ.27) ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಕರ್ನಾಟಕ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೇಂದ್ರ ತನಿಖಾ ದಳ (ಸಿಬಿಐ), ವಿದೇಶಾಂಗ ಸಚಿವಾಲಯ (ಎಂಇಎ), ಗೃಹ ಸಚಿವಾಲಯ (ಎಂಎಚ್ಎ) ಹಾಗೂ ಕರ್ನಾಟಕ ಪೊಲೀಸರ ಸಹಯೋಗದಲ್ಲಿ ಈ ಕಾರ್ಯಾಚರಣೆ ನಡೆದಿದೆ.

2002ರ ಜುಲೈನಲ್ಲಿ ನಡೆದ ಮನೋಹರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಚಾರ್ಯ ವಿರುದ್ಧ ಕೊಲೆಗೆ ಪ್ರಚೋದನೆ ನೀಡಿದ ಆರೋಪವಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302ರಡಿ ಅಪರಾಧ ಸಂಖ್ಯೆ 251/2002ರಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆ ಪ್ರಕರಣದಲ್ಲಿ ಇತರ ಆರೋಪಿಗಳೊಂದಿಗೆ ಸೇರಿ ಆಚಾರ್ಯ ಸಂಚು ರೂಪಿಸಿದ್ದರು ಎಂದು ಸಿಬಿಐ ತಿಳಿಸಿದೆ.
2019ರಲ್ಲಿ ಭಾರತದಿಂದ ಪರಾರಿಯಾಗಿದ್ದ ಆಚಾರ್ಯ ಸೇರಿದಂತೆ ಪ್ರಕರಣದ ಎಲ್ಲಾ ಆರೋಪಿಗಳ ವಿರುದ್ಧ ಈಗಾಗಲೇ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದೆ.
ಕರ್ನಾಟಕ ಪೊಲೀಸರ ಮನವಿಯ ಮೇರೆಗೆ ನವದೆಹಲಿಯ ಇಂಟರ್ಪೋಲ್ ರಾಷ್ಟ್ರೀಯ ಕೇಂದ್ರ ಕಚೇರಿ (ಎನ್ಸಿಬಿ) ಮೂಲಕ ಆಚಾರ್ಯ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಕ್ರಮ ಕೈಗೊಳ್ಳಲಾಗಿತ್ತು. ಮೇ 2026ರಲ್ಲಿ ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿದ್ದು, ಭಾರತಕ್ಕೆ ಮರಳಿಸುವ ಪ್ರಯತ್ನದ ಭಾಗವಾಗಿ ಸುಮಾರು ಮೂರು ತಿಂಗಳ ಹಿಂದೆ ಅವರ ಪಾಸ್ಪೋರ್ಟ್ ರದ್ದುಗೊಳಿಸಲಾಗಿತ್ತು.

ಇದರ ಬೆನ್ನಲ್ಲೇ ಯುಎಇ ಅಧಿಕಾರಿಗಳು ಆಚಾರ್ಯ ಅವರನ್ನು ಪತ್ತೆಹಚ್ಚಿ ಬಂಧಿಸಿದ್ದರು. ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಅವರನ್ನು ಭಾರತಕ್ಕೆ ಗಡೀಪಾರು ಮಾಡಲಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ಪ್ರಕಾರ, ನ.27ರಂದು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆಚಾರ್ಯ ಅವರನ್ನು ಕರ್ನಾಟಕ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಹಾಗೂ ಉಡುಪಿ ಜಿಲ್ಲಾ ಪೊಲೀಸರ ಜಂಟಿ ತಂಡ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಉಡುಪಿಗೆ ಕರೆತರಲು ಮುಂಬೈಗೆ ತೆರಳಿದೆ.

300ಕ್ಕೂ ಹೆಚ್ಚು ವಾಂಟೆಡ್ ಅಪರಾಧಿಗಳ ವಾಪಸ್
ಭಾರತದ ರಾಷ್ಟ್ರೀಯ ಇಂಟರ್ಪೋಲ್ ಕೇಂದ್ರ ಕಚೇರಿಯಾಗಿ ಕಾರ್ಯನಿರ್ವಹಿಸುವ ಸಿಬಿಐ, ಭಾರತ್ಪೋಲ್ ಮೂಲಕ ದೇಶದ ವಿವಿಧ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಅಂತರರಾಷ್ಟ್ರೀಯ ಪೊಲೀಸ್ ಸಹಕಾರವನ್ನು ಸಮನ್ವಯಗೊಳಿಸುತ್ತದೆ.
2019ರಿಂದ ಇಂಟರ್ಪೋಲ್ ಚಾನೆಲ್ಗಳ ಮೂಲಕ 300ಕ್ಕೂ ಹೆಚ್ಚು ವಾಂಟೆಡ್ ಅಪರಾಧಿಗಳನ್ನು ಭಾರತಕ್ಕೆ ಮರಳಿ ಕರೆತರಲಾಗಿದೆ. 2026ರಲ್ಲೇ 77 ಪರಾರಿಯಾದ ಆರೋಪಿಗಳನ್ನು ಭಾರತಕ್ಕೆ ಕರೆತರಲಾಗಿದೆ ಎಂದು ಸಿಬಿಐ ತಿಳಿಸಿದೆ.


