Breaking
16 Oct 2026, Fri

ನಾವೂರು: ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ: ಮೂವರ ಬಂಧನ

ಬೆಳ್ತಂಗಡಿ: ನಾವೂರಿನಲ್ಲಿ ಡಾ. ಪ್ರದೀಪ್ ಅವರು ನಡೆಸುತ್ತಿದ್ದ ಸ್ವಾತಿ ಕಟ್ಟಡದ ಆರೋಗ್ಯ ಕ್ಲಿನಿಕ್‌ಗೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ನಾವೂರು ನಿವಾಸಿ ರವಿ ಪೂಜಾರಿ(31), ನಾವೂರು ನಿವಾಸಿ ಸುರೇಶ್ ಇಂಚರ(44) ಹಾಗೂ ಪುತ್ತೂರಿನ ಕೌಡಿಚಾರು ನಿವಾಸಿ ದಿನೇಶ್ ಪ್ರಭು(51) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಅ.6ರಂದು ತಡರಾತ್ರಿ ದುಷ್ಕರ್ಮಿಗಳು ಕ್ಲಿನಿಕ್‌ಗೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿತ್ತು. ಘಟನೆಯಲ್ಲಿ ಕ್ಲಿನಿಕ್‌ನಲ್ಲಿದ್ದ ಔಷಧಿಗಳು ಹಾಗೂ ವೈದ್ಯಕೀಯ ಸಲಕರಣೆಗಳು ಸುಟ್ಟುಹೋಗಿದ್ದು, ಸುಮಾರು 2ರಿಂದ 3 ಲಕ್ಷ ರೂ. ನಷ್ಟ ಸಂಭವಿಸಿತ್ತು. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 326 ಮತ್ತು 324ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಘಟನೆಯ ಹಿಂದೆ ಇರುವವರನ್ನು ಪತ್ತೆಹಚ್ಚಿ ಸಮಗ್ರ ತನಿಖೆ ನಡೆಸುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ನಾವೂರು ಗ್ರಾಮದಲ್ಲಿ ಇಂತಹ ಘಟನೆಗಳು ಪದೇಪದೇ ನಡೆಯುತ್ತಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲಿ ಡಾ. ಪ್ರದೀಪ್ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದರು.

ಸಾರ್ವಜನಿಕರ ಒತ್ತಾಯದ ಬೆನ್ನಲ್ಲೇ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ ಬೆಳ್ತಂಗಡಿ ಪೊಲೀಸರು ಕೃತ್ಯ ನಡೆದ ಒಂದು ವಾರದಲ್ಲಿ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಈ ಮೂವರು ಸೇರಿ ಬೆಂಕಿ ಹಾಕುವ ಸಂಚನ್ನು ರೂಪಿಸಿದ್ದು ರವಿ ಬೆಂಕಿ ಹಚ್ಚಿರುವುದಾಗಿ ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಂಡಿರುವುದಾಗಿ ತಿಳಿದು ಬಂದಿದೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಪ್ರಮುಖ ಆರೋಪಿ ರವಿಕುಮಾರ್ ನನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್‌ ವಶಕ್ಕೆ ನೀಡಲಾಗಿದ್ದು ಇನ್ನಿಬ್ಬರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Leave a Reply

Your email address will not be published. Required fields are marked *