ಚಿಕ್ಕಮಗಳೂರು: ಗೌರಮ್ಮನ ಮೆರವಣಿಗೆ ವೇಳೆ ಪಟಾಕಿ ಸಿಡಿದು ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಚಿಕ್ಕಮಗಳೂರು ತಾಲೂಕಿನ ಲಕ್ಯಾ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.

ಗೌರಮ್ಮನ ಮೆರವಣಿಗೆಯ ಸಂದರ್ಭದಲ್ಲಿ ಯುವಕರು ರಾಟೆಗೆ ಪಟಾಕಿ ಕಟ್ಟಿ ಬೆಂಕಿ ಹಚ್ಚಿದ್ದರು ಎನ್ನಲಾಗಿದೆ. ಈ ವೇಳೆ ಪಟಾಕಿ ಏಕಾಏಕಿ ಮೆರವಣಿಗೆ ವೀಕ್ಷಿಸಲು ಬಂದಿದ್ದವರ ಮೇಲೆ ಸಿಡಿದ ಪರಿಣಾಮ ಮಂಜುನಾಥ್, ರತ್ನ ಹಾಗೂ ಭಾಗ್ಯ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪಟಾಕಿ ಸಿಡಿದ ರಭಸಕ್ಕೆ ಮಂಜುನಾಥ್ ಅವರ ತಲೆ, ಮುಖ ಹಾಗೂ ಕಣ್ಣಿನ ಭಾಗಕ್ಕೆ ತೀವ್ರ ಗಾಯಗಳಾಗಿವೆ. ಅವರ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ರತ್ನ ಮತ್ತು ಭಾಗ್ಯ ಅವರ ಮುಖಕ್ಕೂ ಗಂಭೀರ ಗಾಯಗಳಾಗಿದ್ದು, ಇಬ್ಬರನ್ನೂ ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಲಕ್ಯಾ ಗ್ರಾಮದಲ್ಲಿ ಪ್ರತಿವರ್ಷ ಗಣಪತಿ ವಿಸರ್ಜನೆಯ ಬಳಿಕ ಗೌರಮ್ಮನ ಮೆರವಣಿಗೆ ನಡೆಸುವ ಸಂಪ್ರದಾಯವಿದೆ. ಮುಂಜಾನೆಯವರೆಗೂ ನಡೆಯುವ ಮೆರವಣಿಗೆ ಹಾಗೂ ವಿಸರ್ಜನಾ ಕಾರ್ಯಕ್ರಮವನ್ನು ವೀಕ್ಷಿಸಲು ಸಾವಿರಾರು ಮಂದಿ ಸೇರುತ್ತಾರೆ.

ಈ ಬಾರಿಯೂ ಮೆರವಣಿಗೆ ಸಂಭ್ರಮದಿಂದ ಸಾಗುತ್ತಿದ್ದ ವೇಳೆ ಪಟಾಕಿ ಅವಘಡ ಸಂಭವಿಸಿದ್ದು, ಸಂಭ್ರಮದ ವಾತಾವರಣ ಆತಂಕಕ್ಕೆ ತಿರುಗಿದೆ.
ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.



