ಮಂಗಳೂರು: ಹೌತಿ ಬಂಡುಕೋರರ ದಾಳಿಯ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಹಾರಾಟ ರದ್ದುಗೊಂಡಿರುವುದರಿಂದ ಮಂಗಳೂರಿನಿಂದ ಉಮ್ರಾ ಯಾತ್ರೆಗೆ ತೆರಳಿರುವ ಸುಮಾರು 500 ಮಂದಿ ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದಕ್ಷಿಣ ಕನ್ನಡ ಹಜ್ ಉಮ್ರಾ ಪ್ರೈವೇಟ್ ಟೂರ್ ಆರ್ಗನೈಸರ್ಸ್ ಅಸೋಸಿಯೇಶನ್ ತಿಳಿಸಿದೆ.

ಮಕ್ಕಾ ಮತ್ತು ಮದೀನಾಗಳಲ್ಲಿ ಯಾತ್ರಾರ್ಥಿಗಳು ತಂಗಿದ್ದ ಹೋಟೆಲ್ಗಳ 15 ದಿನಗಳ ಬುಕಿಂಗ್ ಅವಧಿ ಮುಗಿದಿದ್ದರೂ, ಅವರಿಗೆ ಅಲ್ಲಿಯೇ ಉಳಿದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೂ ವಿಮಾನಗಳ ಹಾರಾಟ ರದ್ದತಿಯಿಂದಾಗಿ ಸ್ವದೇಶಕ್ಕೆ ಮರಳಲು ಸಾಧ್ಯವಾಗದೆ ಯಾತ್ರಾರ್ಥಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ.

ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೂಡಲೇ ನೆರವಿಗೆ ಧಾವಿಸಬೇಕು ಎಂದು ಅಸೋಸಿಯೇಶನ್ನ ಉಪಾಧ್ಯಕ್ಷ ಉಸ್ಮಾನ್ ಸಅದಿ ಪಟ್ಟೋರಿ ಮನವಿ ಮಾಡಿದರು. ಅವರು ಗುರುವಾರ ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಚಿಕ್ಕಮಗಳೂರು ಸೇರಿದಂತೆ ವಿವಿಧ ಪ್ರದೇಶಗಳ ಸುಮಾರು 500 ಮಂದಿ ಸೆಪ್ಟೆಂಬರ್ 20ರ ಬಳಿಕ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಪವಿತ್ರ ಉಮ್ರಾ ಯಾತ್ರೆಗಾಗಿ ಮಕ್ಕಾ ಮತ್ತು ಮದೀನಾಕ್ಕೆ ತೆರಳಿದ್ದರು ಎಂದು ಅವರು ತಿಳಿಸಿದರು.

ವಿಮಾನಗಳ ಹಾರಾಟ ರದ್ದಾಗಿರುವುದರಿಂದ ಪ್ರಯಾಣಿಕರ ಟಿಕೆಟ್ ಹಣ ಮರುಪಾವತಿ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆಯಿದೆ. ಯಾತ್ರಾರ್ಥಿಗಳ ವಸತಿ ವ್ಯವಸ್ಥೆಗಾಗಿ ಟ್ರಾವೆಲ್ ಸಂಸ್ಥೆಗಳು ಹೋಟೆಲ್ಗಳಿಗೆ ಮುಂಗಡವಾಗಿ ಪಾವತಿಸಿರುವ ಹಣವನ್ನು ವಾಪಸ್ ಪಡೆಯುವುದೂ ಕಷ್ಟವಾಗಿದೆ. ಕೆಲವು ಹೋಟೆಲ್ಗಳ ಬುಕಿಂಗ್ ಮೊತ್ತ ಮರುಪಾವತಿಯಾಗದಿರುವುದರಿಂದ ಪ್ರವಾಸ ಆಯೋಜಕ ಸಂಸ್ಥೆಗಳು ಆರ್ಥಿಕ ನಷ್ಟ ಎದುರಿಸುವಂತಾಗಿದೆ ಎಂದು ಉಸ್ಮಾನ್ ಸಅದಿ ವಿವರಿಸಿದರು.

ವಿಮಾನಯಾನ ಸಂಸ್ಥೆಗಳು ವಿಮಾನ ರದ್ದತಿಯಿಂದ ತೊಂದರೆಗೊಳಗಾದ ಪ್ರಯಾಣಿಕರಿಗೆ ನಿಯಮಾನುಸಾರ ಟಿಕೆಟ್ ಹಣ ಮರುಪಾವತಿಸಲು ಕ್ರಮ ಕೈಗೊಳ್ಳಬೇಕು. ಟ್ರಾವೆಲ್ ಸಂಸ್ಥೆಗಳು ಎದುರಿಸುತ್ತಿರುವ ಹೋಟೆಲ್ ಬುಕಿಂಗ್ ಮೊತ್ತದ ನಷ್ಟ ಹಾಗೂ ಮರುಪಾವತಿ ವಿಳಂಬದ ಸಮಸ್ಯೆಗಳನ್ನು ಸಂಬಂಧಪಟ್ಟ ಸಂಸ್ಥೆಗಳು ಸಹಾನುಭೂತಿಯಿಂದ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು.

ಟಿಕೆಟ್ ಹಣ ಮರುಪಾವತಿಯಾಗುವವರೆಗೆ ಪ್ರಯಾಣಿಕರು ಮತ್ತು ಯಾತ್ರಾರ್ಥಿಗಳು ಟ್ರಾವೆಲ್ ಸಂಸ್ಥೆಗಳೊಂದಿಗೆ ಸಹಕರಿಸಿ, ಮರುಪಾವತಿ ಪ್ರಕ್ರಿಯೆಗೆ ಅಗತ್ಯ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಅಕ್ಟೋಬರ್ ತಿಂಗಳ ಶಾಲಾ ರಜೆಯ ಹಿನ್ನೆಲೆಯಲ್ಲಿ ಉಮ್ರಾ ಯಾತ್ರೆ ಹಾಗೂ ಕುಟುಂಬ ಸದಸ್ಯರ ಭೇಟಿಗಾಗಿ ಮುಂಗಡ ಬುಕಿಂಗ್ ಮಾಡಿಕೊಂಡಿದ್ದ ಅನೇಕ ಪ್ರಯಾಣಿಕರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಿಯಾದ್, ದಮ್ಮಾಮ್, ಜೆದ್ದಾ, ಮದೀನಾ ಸೇರಿದಂತೆ ಸೌದಿ ಅರೇಬಿಯಾದ ವಿವಿಧ ಸ್ಥಳಗಳಿಗೆ ತೆರಳಬೇಕಿದ್ದವರು ಹಾಗೂ ಅಲ್ಲಿಂದ ಭಾರತಕ್ಕೆ ಹಿಂದಿರುಗಬೇಕಿದ್ದವರ ಪ್ರಯಾಣಕ್ಕೂ ಅಡಚಣೆಯಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಶನ್ನ ಪ್ರಧಾನ ಕಾರ್ಯದರ್ಶಿ ಜಾಕಿರ್ ಇಕ್ಲಾಸ್ ಜಾಕಿರ್, ಹಮೀದ್, ಹಸನ್ ಸಾದ್, ಇಕ್ಬಾಲ್, ಮೊಯ್ದಿನ್ ಮತ್ತಿತರರು ಉಪಸ್ಥಿತರಿದ್ದರು.




