ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಹಿನ್ನೆಲೆಯಲ್ಲಿ ನಗರದ ಚರ್ಚ್ವೊಂದರ ಧರ್ಮಗುರುವಿನ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಎಫ್ಐಆರ್ನಲ್ಲಿ ಉಲ್ಲೇಖಿಸಿರುವ ಪ್ರಕಾರ, ಧರ್ಮಗುರು ಅಪ್ರಾಪ್ತ ಬಾಲಕನಿಗೆ ಚಾಕ್ಲೆಟ್ ನೀಡಿ, “ಯು ಆರ್ ಎ ಸ್ವೀಟ್ ಬಾಯ್”, “ನಿನ್ನ ನಗು ಚೆನ್ನಾಗಿದೆ”, “ಐ ಲವ್ ಯು” ಎಂದು ಹೇಳಿ ಪುಸಲಾಯಿಸಿದ್ದಾರೆ. ಬಳಿಕ ಬಾಲಕನನ್ನು ಚರ್ಚ್ನ ಕೊಠಡಿಯೊಂದಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಅಲ್ಲದೆ, ಆಗಸ್ಟ್ 14ರಂದು ಸಂಜೆ 6.30ರ ಸುಮಾರಿಗೆ ಬಾಲಕ ಪ್ರಾರ್ಥನೆಗಾಗಿ ಚರ್ಚ್ಗೆ ತೆರಳಿದ್ದಾಗಲೂ ಆತನನ್ನು ಕೊಠಡಿಯೊಂದಕ್ಕೆ ಕರೆದೊಯ್ದು ದೌರ್ಜನ್ಯ ಎಸಗಿರುವುದಾಗಿ ಎಫ್ಐಆರ್ನಲ್ಲಿ ತಿಳಿಸಲಾಗಿದೆ.

ಈ ವಿಚಾರವನ್ನು ಬಾಲಕ ತನ್ನ ಸ್ನೇಹಿತರಲ್ಲಿ ಹೇಳಿಕೊಂಡಾಗ, ಅವರಿಗೂ ಇದೇ ರೀತಿಯಲ್ಲಿ ನಿರಂತರವಾಗಿ ದೌರ್ಜನ್ಯ ಎಸಗಿರುವ ಬಗ್ಗೆ ತಿಳಿದುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬಳಿಕ ಬಾಲಕರು ಈ ವಿಚಾರವನ್ನು ತಮ್ಮ ಪೋಷಕರ ಗಮನಕ್ಕೆ ತಂದಿದ್ದು, ಪೋಷಕರು ಬಿಷಪ್ ಅವರ ಗಮನಕ್ಕೆ ತಂದಿದ್ದಾರೆ. ಪೊಲೀಸರಿಗೆ ದೂರು ನೀಡುವಂತೆ ಬಿಷಪ್ ಸೂಚಿಸಿದ ಹಿನ್ನೆಲೆಯಲ್ಲಿ ದೂರು ಸಲ್ಲಿಸಲಾಗಿದೆ ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ.
ದೂರಿನ ಆಧಾರದಲ್ಲಿ ಪಾಂಡೇಶ್ವರ ಪೊಲೀಸರು ಆರೋಪಿತ ಧರ್ಮಗುರುವಿನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.




