ಮಾವಿನಕಟ್ಟೆ: ಕರ್ನಾಟಕ ಸರ್ಕಾರದ ಗೃಹಲಕ್ಷ್ಮೀ ಯೋಜನೆಯಡಿ ಕಳೆದ ಮೂರು ವರ್ಷಗಳಿಂದ ದೊರೆತ ಹಣವನ್ನು ಒಟ್ಟುಗೂಡಿಸಿ, ಶಕುಂತಳಾ ಬಾಚೆಕೆರೆ ಅವರು ಮಾವಿನಕಟ್ಟೆಯ ಬಿ.ಎನ್.ಎಸ್. ಕಾಂಪ್ಲೆಕ್ಸ್ನಲ್ಲಿ ‘ಶ್ರೀ ದುರ್ಗಾ ಗೃಹಲಕ್ಷ್ಮೀ’ ವಸ್ತ್ರ ಮಳಿಗೆಯನ್ನು ಆರಂಭಿಸಿದ್ದಾರೆ.

ಮಳಿಗೆಯನ್ನು ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪುರಸ್ಕೃತರು ಹಾಗೂ ಜವಾಹರ್ ಬಾಲ್ ಮಂಚ್ನ ಜಿಲ್ಲಾ ಅಧ್ಯಕ್ಷೆ, ನ್ಯಾಯವಾದಿ ಶೈಲಜಾ ರಾಜೇಶ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆಯ ಹಣವನ್ನು ಉಳಿತಾಯ ಮಾಡಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಶಕುಂತಳಾ ಬಾಚೆಕೆರೆ ಅವರು ಉದ್ಯಮ ಆರಂಭಿಸಿರುವುದು ಶ್ಲಾಘನೀಯ. ಅವರ ಪ್ರಯತ್ನ ಇತರ ಮಹಿಳೆಯರಿಗೂ ಮಾದರಿಯಾಗಿದೆ. ಸರ್ಕಾರದ ಗೃಹಲಕ್ಷ್ಮೀ ಯೋಜನೆಯ ಸದುಪಯೋಗ ಪಡೆದುಕೊಂಡು ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಬದುಕು ರೂಪಿಸಿಕೊಳ್ಳಬೇಕು ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ದೇಜಪ್ಪ ಬಾಚೆಕೆರೆ ಅವರು ಹೊಲಿಗೆ ಯಂತ್ರವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಂಪತ್ ಕುಮಾರ್, ಪುರುಷೋತ್ತಮ್ ಕಾಯರ್ ಮಲ್ಕೆ, ಚಂದ್ರಶೆಟ್ಟಿ ಹೊಳ್ಳರಗುತ್ತು, ಆದಮ್ ಕುಂಜಿ, ಮಮ್ತಾಜ್ ಹಾಗೂ ಬಂಟ್ವಾಳ ಗೃಹಲಕ್ಷ್ಮೀ ಯೋಜನೆಯ ಅಧ್ಯಕ್ಷೆ ಜಯಂತಿ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದು, ಮಳಿಗೆಯ ಮಾಲಕಿ ಶಕುಂತಳಾ ಬಾಚೆಕೆರೆ ಅವರಿಗೆ ಶುಭ ಹಾರೈಸಿದರು.




