Breaking
31 Aug 2026, Mon

“ನಾರಾಯಣ ಗುರುಗಳ ತತ್ವಸಂದೇಶಗಳು ಇಂದಿಗೂ ಪ್ರಸ್ತುತ” – ಪ್ರಶಾಂತ್ ಬಿ. ಅನಂತಾಡಿ

ಮಾಣಿ: ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮದಿನಾಚರಣೆಯ ಅಂಗವಾಗಿ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಆಯೋಜಿಸಿರುವ “ಮನೆ ಮನೆಗೆ ಗುರುತತ್ವ ಸಂದೇಶ” ಕಾರ್ಯಕ್ರಮಕ್ಕೆ ನಾರಾಯಣ ಗುರು ತತ್ವ ನಿರ್ದೇಶಕ ಶ್ರೀಧರ ಪೂಜಾರಿ ಮುಜಾಲ ಅವರ ಮನೆಯಲ್ಲಿ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಶಾಂತ್ ಬಿ. ಅನಂತಾಡಿ, ನಾರಾಯಣ ಗುರುಗಳು ಕೇವಲ ಒಬ್ಬ ಗುರುಗಳಾಗಿರದೆ, ಸಮಾಜಕ್ಕೆ ಉತ್ತಮ ತತ್ವಸಂದೇಶ ಹಾಗೂ ಮಾರ್ಗದರ್ಶನ ನೀಡಿದ ಮಹಾನ್ ದಾರ್ಶನಿಕರು. ಇಂದಿನ ಸಮಾಜದಲ್ಲಿಯೂ ಅವರ ತತ್ವಸಂದೇಶಗಳು ಅತ್ಯಂತ ಪ್ರಸ್ತುತವಾಗಿವೆ ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಜನಾರ್ದನ ಪೂಜಾರಿ ಕೊಡಂಗೆ ಅವರ ತಂಡದವರು ಭಜನೆ ಹಾಗೂ ಸಂಕೀರ್ತನೆಯ ಮೂಲಕ ನಾರಾಯಣ ಗುರುಗಳನ್ನು ಭಕ್ತಿಭಾವದಿಂದ ಸ್ಮರಿಸಿದರು. ಈ ಸಂದರ್ಭದಲ್ಲಿ ಗುರುಗಳ ತತ್ವ, ಆದರ್ಶ ಹಾಗೂ ಮಾನವೀಯ ಮೌಲ್ಯಗಳನ್ನು ಮನನ ಮಾಡಲಾಯಿತು.

ಮನೆ ಮನೆಗೂ ನಾರಾಯಣ ಗುರುಗಳ ತತ್ವಸಂದೇಶಗಳನ್ನು ತಲುಪಿಸಿ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮನೋಭಾವ ಬೆಳೆಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ ತಿಳಿಸಿದರು. ಭಜನೆ, ಸಂಕೀರ್ತನೆ ಹಾಗೂ ಗುರುತತ್ವ ಸಂದೇಶಗಳ ಮೂಲಕ ಸಮಾಜದಲ್ಲಿ ಮಾನವೀಯತೆ, ಸಮಾನತೆ ಮತ್ತು ಸಹೋದರತ್ವದ ಮೌಲ್ಯಗಳನ್ನು ಬಲಪಡಿಸುವ ಪ್ರಯತ್ನ ಇದಾಗಿದೆ ಎಂದರು.

ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಮಾಣಿ ಘಟಕದ ಮಾಜಿ ಅಧ್ಯಕ್ಷರಾದ ಹರೀಶ್ ಪೂಜಾರಿ ಬಾಕಿಲ, ರಮೇಶ್ ಪೂಜಾರಿ ಮುಜಾಲ, ಜಯಂತ ಬರಿಮಾರು ಸೇರಿದಂತೆ ಊರಿನ ಗೌರವಾನ್ವಿತ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ವಿಶ್ವನಾಥ ಪೂಜಾರಿ ಸ್ವಾಗತಿಸಿದರು. ಕೋಶಾಧಿಕಾರಿ ಡಾ. ತ್ರಿವೇಣಿ ರಮೇಶ್ ಧನ್ಯವಾದ ಸಮರ್ಪಿಸಿದರು.

Leave a Reply

Your email address will not be published. Required fields are marked *