Breaking
26 Aug 2026, Wed

ಆ್ಯಸಿಡ್ ದಾಳಿ ಪ್ರಕರಣ: ಆರೋಪಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ

ಕಡಬ: 2020ರಲ್ಲಿ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಆ್ಯಸಿಡ್ ದಾಳಿ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಆರೋಪಿಯನ್ನು ಅಪರಾಧಿ ಎಂದು ಘೋಷಿಸಿ ಶಿಕ್ಷೆ ವಿಧಿಸಿದೆ.


ಕೋಡಿಂಬಾಳ ನಿವಾಸಿ ಜಯಾನಂದ ಕೆ. (60) ಶಿಕ್ಷೆಗೆ ಗುರಿಯಾದ ವ್ಯಕ್ತಿ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಆಗಿನ ಇನ್ಸ್ಪೆಕ್ಟರ್ ಕುಸುಮಾಧರ ಅವರು ತನಿಖೆ ನಡೆಸಿದ್ದರು.


ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್ ಅವರು ತೀರ್ಪು ಪ್ರಕಟಿಸಿದ್ದು, ಐಪಿಸಿ ಕಲಂ 326ಎ ಅಡಿಯಲ್ಲಿ ಜಯಾನಂದನಿಗೆ 10 ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ಹಾಗೂ 3 ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ 2 ವರ್ಷಗಳ ಸರಳ ಕಾರಾಗೃಹ ಶಿಕ್ಷೆ ಅನುಭವಿಸಬೇಕು.


ಇದೇ ಪ್ರಕರಣದಲ್ಲಿ ಐಪಿಸಿ ಕಲಂ 504ರಡಿ 1 ವರ್ಷದ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದರೆ 3 ತಿಂಗಳ ಸರಳ ಕಾರಾಗೃಹ ಶಿಕ್ಷೆ ಅನುಭವಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ.


ಸರಕಾರಿ ಅಭಿಯೋಜಕರಾದ ಕೃಷ್ಣವೇಣಿ, ಹರಿಶ್ಚಂದ್ರ ಉದ್ಯಾವರ್, ಪ್ರಕಾಶ್ ಚಂದ್ರ ಶೆಟ್ಟಿ ಹಾಗೂ ಜಯಂತಿ ಕೆ. ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *