Breaking
25 Aug 2026, Tue

ಸಂವಿಧಾನಬದ್ಧ ಹಕ್ಕುಗಳ ರಕ್ಷಣೆಗೆ ಸಂಘಟಿತರಾಗಿ: ಶೇಖರ್ ಕುಕ್ಕೇಡಿ

ಉಜಿರೆ: ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ವ್ಯವಸ್ಥಿತ ಪಿತೂರಿ ದೇಶದಲ್ಲಿ ಆರಂಭವಾಗಿರುವುದು ಅಪಾಯಕಾರಿ ಬೆಳವಣಿಗೆಯಾಗಿದ್ದು, ಇಂತಹ ಸಂದರ್ಭದಲ್ಲಿ ತಮ್ಮ ಸಂವಿಧಾನಬದ್ಧ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಹಾಗೂ ಪಡೆಯಲು ಸಂಘಟಿತರಾಗಬೇಕು ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಪಂಚಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ ಕರೆ ನೀಡಿದರು.

ಉಜಿರೆ ಗಾಂಧಿನಗರದಲ್ಲಿ ಉಜಿರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಸಂವಿಧಾನದ ಮೂಲ ಆಶಯಗಳಲ್ಲಿ ಒಂದಾದ ಮೀಸಲಾತಿಯನ್ನು ರದ್ದುಪಡಿಸಲು ಸಂವಿಧಾನ ವಿರೋಧಿಗಳು ಪ್ರತಿಭಟನೆಯ ಹಂತಕ್ಕೆ ತಲುಪಿದ್ದಾರೆ. ಈ ಹಿನ್ನೆಲೆಯಲ್ಲಿ ದಲಿತ ಸಮುದಾಯ ಸದಾ ಜಾಗೃತರಾಗಿರಬೇಕು.

ಉಜಿರೆಯಲ್ಲಿ 400ಕ್ಕೂ ಹೆಚ್ಚು ದಲಿತ ಕುಟುಂಬಗಳು ವಾಸಿಸುತ್ತಿದ್ದರೂ ಅಂಬೇಡ್ಕರ್ ಭವನ ನಿರ್ಮಾಣವಾಗದಿರುವುದು ಬೇಸರದ ಸಂಗತಿ. ಸ್ವಾಭಿಮಾನದ ಸಂಕೇತವಾಗಿರುವ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಯುವಕರು ಪಣತೊಡಬೇಕು ಎಂದು ಹೇಳಿದರು.

ಸರ್ಕಾರಿ ಜಮೀನು ಗುರುತಿಸಿ, ಅದರ ಹಂಚಿಕೆಗಾಗಿ ಹೋರಾಟವನ್ನು ತೀವ್ರಗೊಳಿಸಬೇಕು. ಸರ್ಕಾರ ಜಮೀನು ಹಂಚಿಕೆ ಸಂದರ್ಭದಲ್ಲಿ ದಲಿತ ಸಮುದಾಯವನ್ನು ಕಡೆಗಣಿಸಿರುವ ಪರಿಣಾಮ ಭೂರಹಿತರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಭೂಮಿಯ ಹಕ್ಕಿಗಾಗಿ ಚಳವಳಿ ನಡೆಸುವ ಅಗತ್ಯವಿದೆ ಎಂದರು.

ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲ ಮಾತನಾಡಿ, ಜನರಲ್ಲಿ ಒಗ್ಗಟ್ಟು ಇಲ್ಲದಿದ್ದರೆ ಅಂಬೇಡ್ಕರ್ ಭವನ ಸೇರಿದಂತೆ ಮೂಲಭೂತ ಸೌಕರ್ಯಗಳಿಂದಲೂ ವಂಚಿತರಾಗಬೇಕಾಗುತ್ತದೆ. ಆದ್ದರಿಂದ ಸಂಘಟನೆ ಇಂದಿನ ಅಗತ್ಯವಾಗಿದೆ. ಡಿಸಿ ಮನ್ನಾ ಜಮೀನು ಹೋರಾಟ ಒಂದು ಹಂತಕ್ಕೆ ತಲುಪಿದ್ದು, ಅರ್ಹ ಫಲಾನುಭವಿಗಳಿಗೆ ಜಮೀನು ಹಂಚಿಕೆಯಾಗುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ಸಭೆಯಲ್ಲಿ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷರಾಗಿ ಸತೀಶ್ ಹಾಗೂ ರವಿ ಆರ್.ಜೆ., ಕಾರ್ಯದರ್ಶಿಯಾಗಿ ದಿನೇಶ್ ಗಾಂಧಿನಗರ ಆಯ್ಕೆಯಾದರು.

ದಸಂಸ (ಅಂಬೇಡ್ಕರ್ ವಾದ) ವೇಣೂರು ಹೋಬಳಿ ಸಂಚಾಲಕ ಚರಣ್ ಕುಕ್ಕೇಡಿ, ಸಂವಿಧಾನ ಸಂರಕ್ಷಣಾ ಸಮಿತಿ ಬೆಳ್ತಂಗಡಿ ಕೋಶಾಧಿಕಾರಿ ಶಿವಾನಂದ ಪಡಂಗಡಿ ಹಾಗೂ ಮಾಜಿ ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ಉಪಸ್ಥಿತರಿದ್ದರು.

ಸಂವಿಧಾನ ಸಂರಕ್ಷಣಾ ಸಮಿತಿ ಬೆಳ್ತಂಗಡಿ ಜೊತೆ ಕಾರ್ಯದರ್ಶಿ ವಿನಯ್ ಕುಮಾರ್ ಗಾಂಧಿನಗರ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

Leave a Reply

Your email address will not be published. Required fields are marked *