ಮಂಗಳೂರು: ಪ್ರಾಣಾಪಾಯದ ಸ್ಥಿತಿಯಲ್ಲಿದ್ದ ಏಳು ತಿಂಗಳ ಗರ್ಭಿಣಿಯೊಬ್ಬರ ಜೀವವನ್ನು ಮಂಗಳೂರಿನ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆ ಹಾಗೂ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ತಜ್ಞ ವೈದ್ಯರ ತಂಡ ಸಂಘಟಿತ ಚಿಕಿತ್ಸೆಯ ಮೂಲಕ ರಕ್ಷಿಸಿರುವ ಘಟನೆ ನಡೆದಿದೆ.

ತಾಯಿ ಮಗುವಿನ ಆರೋಗ್ಯ ಕ್ಷೇತ್ರದಲ್ಲಿ ಬಹಳಷ್ಟು ದೊಡ್ಡ ಮಟ್ಟದ ಕ್ರಾಂತಿಯನ್ನೇ ಮಾಡಿದ ಮಂಗಳೂರಿನ ಸರಕಾರಿ ಲೇಡಿಗೋಷನ್ ಆಸ್ಪತ್ರೆ, ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದ, ಪ್ರಾಣ ಕಂಟಕ ಸ್ಥಿತಿಯಲ್ಲಿದ್ದ ಗರ್ಭಿಣಿ ಸ್ತ್ರೀ ಓರ್ವರ ಜೀವ ರಕ್ಷಣೆಯನ್ನು ಮಾಡಿ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿತು.
ಕಳೆದ ಎರಡು ದಿನಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶದ ಏಳು ತಿಂಗಳ ಗರ್ಭಿಣಿ ಮಹಿಳೆಯೋರ್ವರು ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಖಾಸಗಿ ಆಸ್ಪತ್ರೆಯ ವೈದ್ಯಕೀಯ ಸಹಾಯವನ್ನು ಯಾಚಿಸಿದ್ದರು.

ಅಸಹಜ ಮತ್ತು ಅಕಾಲಿಕ ವೇದನೆಯ ಗಂಭೀರತೆಯನ್ನು ಅರಿತ ಖಾಸಗಿ ಆಸ್ಪತ್ರೆ ತಮ್ಮ ಅಸಹಾಯಕತೆಯನ್ನು ವ್ಯಕ್ತ ಪಡಿಸಿ ಮಂಗಳೂರಿನ ಸರಕಾರಿ ಲೇಡಿಗೋಷನ್ ಆಸ್ಪತ್ರೆಗೆ ಈ ಮಹಿಳೆಯನ್ನು ಕಳುಹಿಸಿಕೊಡುತ್ತಾರೆ.
ಹೆರಿಗೆ ನೋವಿಗೆ ವ್ಯತಿರಿಕ್ತವಾದ ಈ ನೋವಿನ ಹಿನ್ನೆಲೆ ಮತ್ತು ಕಾರಣವನ್ನು ಅರಿಯುವ ನಿಟ್ಟಿನಲ್ಲಿ ವಿವಿಧ ಪರೀಕ್ಷೆಗೆ ಒಳಪಡಿಸಲಾಗಿ ಉದರದಲ್ಲಿ ರಕ್ತ ಸ್ರಾವವಾಗಿರುವುದನ್ನು ಪತ್ತೆ ಹಚ್ಚಲಾಗುತ್ತದೆ. ಈ ರೋಗಿಯ ಹಿಮೋಗ್ಲೋಬಿನ್ ಅಂಶ ಕನಿಷ್ಠ 6 ಗ್ರಾಂಗಳಿಗೆ ಇಳಿದುದಲ್ಲದೆ ರಕ್ತದಲ್ಲಿ ಆಮ್ಲಜನಕವೂ ಕೂಡಾ ಗಂಭೀರಸ್ಥಿತಿಯ ಕೆಳಮಟ್ಟಕ್ಕೆ ಇಳಿಯಲಾರಂಬಿಸುತ್ತದೆ.

ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಎಂ.ಆರ್.ಐ. ಮಾಡಿ ನಿರ್ಣಯಕ್ಕೆ ಬರುವ ಸವಾಲು ಮುಂದೊಡ್ಡಿ ಬರುತ್ತದೆ. ಲೇಡಿಗೋಶನ್ ಆಸ್ಪತ್ರೆಯ ಹಿರಿಯ ತಜ್ಞ ವೈದ್ಯರು ಅಂಬುಲೆನ್ಸ್ ನಲ್ಲಿ ರೋಗಿಯ ಜೊತೆಗೂಡಿಕೊಂಡು ಅತ್ತಾವರದ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಸಂಬಂಧಿತ ಎಂ.ಆರ್.ಐ. ಪರೀಕ್ಷೆಯನ್ನು ಮಾಡಿಸಿ ಶಸ್ತ್ರಚಿಕಿತ್ಸೆಯ ಅವಶ್ಯಕತೆಯನ್ನು ಮನಗಾಣುತ್ತಾರೆ.
ಶಸ್ತ್ರಚಿಕಿತ್ಸಾನಂತರ ಸದ್ರಿ ರೋಗಿಗೆ ಐ.ಸಿ.ಯು.ನ ಅವಶ್ಯಕತೆ ಇದ್ದು ಅದನ್ನು ವೆನ್ಲಾಕ್ ಆಸ್ಪತ್ರೆಯಲ್ಲಿರುವ ಐ.ಸಿ.ಯು ನ ಬೆಡ್ ಗೆ ಬೇಡಿಕೆ ಸಲ್ಲಿಸಲಾಗುತ್ತದೆ. ಆದರೆ ದುರಾದೃಷ್ಟವಶಾತ್ ವೆನ್ಲಾಕ್ ಆಸ್ಪತ್ರೆಯಲ್ಲಿ ಐ.ಸಿ.ಯು. ಬೆಡ್ ನ ಲಭ್ಯತೆ ಇರುವುದಿಲ್ಲ. ಆದರೆ ಎದೆಗುಂದದ ಲೇಡಿಗೋಷನ್ ತಂಡ ಈಕೆಯನ್ನು ಲೇಡಿಗೋಷನ್ ಆಸ್ಪತ್ರೆಗೆ ಮರಳಿ ಕರೆತಂದು ಚಿಕಿತ್ಸೆಯನ್ನು ಮುಂದುವರಿಸುತ್ತದೆ.

ಇಪ್ಪತ್ತೆಂಟು ವಾರಗಳ ಗರ್ಭಾವಸ್ಥೆಯಲ್ಲಿ ಅವಳ ಪ್ರಸಕ್ತ ಸಮಸ್ಯೆಗೆ ಕಾರಣವನ್ನು ಹುಡುಕುವ ನಿಟ್ಟಿನಲ್ಲಿ ತಜ್ಞರು ಕಂಡುಕೊಂಡಂತೆ ಆಕೆಗೆ ಹಿಂದೊಂದು ಬಾರಿ ಬೇರೆ ಆಸ್ಪತ್ರೆ ಯಲ್ಲಿ ಆದ ಸಿಸೇರಿಯನ್ ಶಸ್ತ್ರಚಿಕಿತ್ಸೆಯಾದ ಗರ್ಭಕೋಶದ ಹಳೆಯ ಗಾಯದಿಂದ ಆ ಭಾಗ ಒಡೆದು ಅಲ್ಲಿಂದ ರಕ್ತಸ್ರಾವವಾಗುತ್ತಿರುವುದನ್ನು ಪತ್ತೆ ಹಚ್ಚಿದ ಸನ್ನಿವೇಶ ಮಾತ್ರ ತಜ್ಞ ವೈದ್ಯರುಗಳ ವಿಶೇಷ ಬುದ್ಧಿ ಮತ್ತೆಗೆ ಹಿಡಿದ ಕೈಗನ್ನಡಿ ಎಂದು ಬೇರೆ ಹೇಳಬೇಕಿಲ್ಲ. ಇಷ್ಟಕ್ಕೇ ಪರಿಸ್ಥಿತಿ ಸೀಮಿತವಾಗಿರುವುದಿಲ್ಲ.

ಉದರದಲ್ಲಿ ಬೆಳೆಯುತ್ತಿರುವ ಗರ್ಭದ ಮಾಸು, ಪ್ಲಾಸೆಂಟಾ ಪರ್ಕ್ರೀಟಾ ಅನ್ನುವ ಗಂಡಾಂತರಕಾರಿ ಸ್ಥಿತಿಯನ್ನು ನಿರ್ಮಿಸಿತ್ತು. ಪ್ಲಾಸೆಂಟಾದ ಈ ಸ್ಥಿತಿಯಲ್ಲಿ ಶಿಶು ಹೊರಗೆ ಬರುವ ದಾರಿಗೆ ಅಡ್ಡಲಾಗಿರುವುದು ಮಾತ್ರವಲ್ಲ ಅದಕ್ಕೆ ಸಂಬಂಧಿಸಿದ ರಕ್ತನಾಳಗಳು ಗರ್ಭಾಶಯವನ್ನು ಮೀರಿ ಹೊರಗೆ ಬಂದು ಮೂತ್ರಕೋಶವನ್ನು ಆಕ್ರಮಿಸಿ ತೀರಾ ಕ್ಲಿಷ್ಟಕರವಾದ ವಾತಾವರಣವನ್ನು ನಿರ್ಮಾಣ ಮಾಡುತ್ತಿದ್ದ ರೀತಿ ಮಾತ್ರ ವೈದ್ಯ ಜಗತ್ತಿಗೆ ಒಂದು ಸವಾಲಾಗಿತ್ತು.
ಶಸ್ತಚಿಕಿತ್ಸೆಯನ್ನು ನಿರ್ವಹಿಸುವ ಸಂದರ್ಭದಲ್ಲಿ ಅನಿಯಂತ್ರಿತ ರಕ್ತಸ್ರಾವದಿಂದಾಗಿ ನೂರಕ್ಕೆ ನೂರು ತಾಯಿ ಮರಣ ಸಂಭವಿಸಿದ ಸಂದರ್ಭಗಳೇ ಹೆಚ್ಚು. ಇಂಥಹ ಸನ್ನಿವೇಶಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ವೈದ್ಯಕೀಯ ಅಧೀಕ್ಷಕರಾದ ಡಾ. ದುರ್ಗಾಪ್ರಸಾದ್ ಎಂ.ಆರ್. ಅವರ ನಿರ್ದೇಶನದಂತೆ ಮಲ್ಟಿ ಡಿಸಿಪ್ಲಿನರಿ ಅಪ್ರೋಚ್ ಮಾದರಿಯನ್ನು ಕಳೆದ ಒಂದೂವರೆ ವರುಷದಿಂದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಪಾಲಿಸಲಾಗುತ್ತಿದೆ.

ಇದರ ಪ್ರಕಾರ ಸ್ತ್ರೀ ರೋಗ ತಜ್ಞರ ಜೊತೆಯಲ್ಲಿ, ಜನರಲ್ ಸರ್ಜನ್ ಹಾಗೂ ಸೂಪರ್ ಸ್ಪೆಶಾಲಿಟಿ ತಜ್ಞರು ಗಳು,ಮತ್ತು ವಿಶೇಷ ಜ್ಞಾನವನ್ನು ಪಡೆದುಕೊಂಡಿರುವ ಅರಿವಳಿಕೆ ತಜ್ಞರುಗಳ ತಂಡ ಇಂಥ ಸನ್ನಿವೇಶಗಳನ್ನು ನಿಭಾಯಿಸುವ ಪೂರ್ವ ಯೋಜನೆಯನ್ನು ಸಿದ್ಧಪಡಿಸಲಾಗಿದೆ.
ರಕ್ತದ ಎಲ್ಲಾ ವಿಧದ ಪ್ರಾಕಾರಗಳನ್ನು ಸಿದ್ಧ ಪಡಿಸಿಕೊಂಡು ಶಸ್ತ್ರಚಿಕಿತ್ಸಾ ಸಮಯದಲ್ಲಿ ರೋಗಿ ಕಳೆದುಕೊಳ್ಳಬಹುದಾದ ಮೂರೂವರೆ ಲೀಟರ್ ಗಳ ರಕ್ತದ ಕೋಂಪೋನೆಂಟ್ ಗಳನ್ನು ಸಂಗ್ರಹ ಮಾಡಿಟ್ಟು ಕೊಳ್ಳಲಾಗುತ್ತದೆ. ಪ್ರಾತಕಾಲ ಸುಮಾರು ಐದು ಗಂಟೆಗೆ ಪ್ರಾರಂಭವಾದ ಶಸ್ತ್ರಚಿಕಿತ್ಸೆ ಪೂರ್ವಾಹ್ನ ಒಂಭತ್ತು ಗಂಟೆಯವರೆಗೆ ನಡೆದು ವೈದ್ಯ ಮತ್ತು ಶುಶ್ರೂಷಕ ವೃಂದದ ಪ್ರಾಮಾಣಿಕ ಪ್ರಯತ್ನದ ಫಲವಾಗಿ ಯಶಸ್ವಿಯಾಯಿತು.

ವೈದ್ಯಕೀಯ ಅಧೀಕ್ಷಕರಾದ ಡಾ. ದುರ್ಗಾಪ್ರಸಾದ್ ಎಂ.ಆರ್. ಇವರ ಸಮರ್ಥ ಮೇಲುಸ್ತುವಾರಿಯಲ್ಲಿ, ನಿವಾಸಿ ವೈದ್ಯಾಧಿಕಾರಿ ಡಾ. ಜಗದೀಶ್ ಹಾಗೂ ಹಿರಿಯ ಪ್ರಸೂತಿ ತಜ್ಞ ಡಾ. ದಯಾನಂದ್ ಇವರ ಸಹಕಾರದೊಂದಿಗೆ ನಡೆದ ಈ ಇಡೀ ಪ್ರಕರಣದಲ್ಲಿ ಕೆ.ಎಂ.ಸಿ.ಯ ಪ್ರಸೂತಿ ತಜ್ಞರುಗಳಾದ ಡಾ. ಭಾರತಿ ಹಾಗೂ ಡಾ. ವಿನೀತಾ ಶೆಟ್ಟಿ, ಮೂತ್ರರೋಗ ತಜ್ಞ ಶಸ್ತ್ರ ಚಿಕಿತ್ಸಕರುಗಳಾದ ಡಾ. ಸದಾನಂದ ಪೂಜಾರಿ ಮತ್ತು ಡಾ. ಪ್ರಮೋದ್, ಜನರಲ್ ಸರ್ಜನ್ ಡಾ. ಅಕ್ಷಿತ್, ಅರಿವಳಿಕೆ ತಜ್ಞರುಗಳಾದ ಡಾ/ರಂಜನ್ ಹಾಗೂ ಡಾ/ರಕ್ಷಿತಾ ಇವರ ಕಾರ್ಯತತ್ಪರ ಸೇವೆ ಅನನ್ಯವಾದುದು.

ಶುಶ್ರೂಷಕ ತಂಡದಲ್ಲಿ ಶ್ರೀಮತಿ ಜಲಜ, ಶ್ರೀಮತಿ ಅಶ್ವಿನಿ, ಶ್ರೀಮತಿ ವಿನೀತಾ, ಶ್ರೀಮತಿ ರೇವತಿ, ಶ್ರೀಮತಿ ಸಿಂಧು ಇವರ ಸಕಾಲಿಕ ಪಾತ್ರ ಬಡ ಹೆಣ್ಣು ಮಗಳ ಪ್ರಾಣ ಉಳಿಸಿರುವುದರಲ್ಲಿ ಮಹತ್ತರವಾದ ಕೊಡುಗೆಯನ್ನು ಕೊಟ್ಟಿರುವುದರಲ್ಲಿ ಸಂದೇಹವೇ ಇಲ್ಲ. ಅಡ್ವಾನ್ಸ್ಡ್ ಲೈಫ್ ಸೇವಿಂಗ್ ಅಂಬುಲೆನ್ಸ್ ಚಾಲಕ ಶ್ರೀ.ಹರೀಶ್ ಅವರ ನೆರವು ಕೂಡಾ ಅಗಣಿತ ಎನ್ನುವುದು ಉಲ್ಲೇಖನೀಯ.

ಸರಕಾರಿ ಲೇಡಿಗೋಷನ್ ಆಸ್ಪತ್ರೆ ಮತ್ತು ಕಸ್ತೂರ್ಬಾ ವೈದ್ಯಕೀಯ ವಿದ್ಯಾಲಯದ ತಜ್ಞರುಗಳ ಸಂಘಟಿತ ಪ್ರಯತ್ನ ಅಮೂಲ್ಯವಾದ ತಾಯಿಯ ಪ್ರಾಣವನ್ನು ಉಳಿಸಿರುವಂತದ್ದು ಸರ್ವರೂ ಮೆಚ್ಚತಕ್ಕ ಅಂಶ.

ಗರ್ಭಿಣಿಯ ಪತಿ ಹೇಳಿರುವ ಮನದಾಳದ ಮಾತು:ಸರಕಾರಿ ಸ್ವಾಮ್ಯದ ಲೇಡಿಗೋಷನ್ ಆಸ್ಪತ್ರೆಗೆ ತನ್ನ ಹೆಂಡತಿಯನ್ನು ಕರೆ ತರದೇ ಇರುತ್ತಿದ್ದಲ್ಲಿ ನನ್ನ ಕುಟುಂಬದ ಸ್ಥಿತಿ ಅಂಧಕಾರಮಯವಾಗುತ್ತಿತ್ತು ಎಂಬ ನುಡಿ ಸರಕಾರಿ ವ್ಯವಸ್ಥೆಯ ಬಗ್ಗೆ ಗೌರವದ ಭಾವನೆಯನ್ನು ಮೂಡಿಸುತ್ತಿದೆ.
ಸರ್ಕಾರಿ ಲೇಡಿಗೋಷನ್ ಆಸ್ಪತ್ರೆ ಮತ್ತು ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ತಜ್ಞರ ಸಂಘಟಿತ ಪ್ರಯತ್ನದಿಂದ ತಾಯಿಯ ಜೀವ ಉಳಿದಿದ್ದು, ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ಸೇವೆಗೆ ಮೆಚ್ಚುಗೆ ವ್ಯಕ್ತವಾಗಿದೆ.


