Breaking
25 Aug 2026, Tue

ಬೋಟಿನಲ್ಲಿ ಗಲಾಟೆ ಕೊಲೆಯಲ್ಲಿ ಅಂತ್ಯ: ಆರೋಪಿ ಗೋವಿಂದ ಪೊಲೀಸ್ ವಶಕ್ಕೆ

ಉಡುಪಿ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಕೆರೆ ದಕ್ಕೆ ಸಮೀಪ ಬೋಟಿನಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದ್ದು, ಚಿಕ್ಕಮಗಳೂರು ಮೂಲದ ಅಭಿಷೇಕ್ (24) ಎಂಬ ಯುವಕ ಮೃತಪಟ್ಟಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ಮೂಲದ ಗೋವಿಂದ ರಾಜು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆ.24ರ ರಾತ್ರಿ ಬೋಟಿನಲ್ಲಿ ಗೋವಿಂದ ಹಾಗೂ ಅಭಿಷೇಕ್ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಆ.25ರ ಮುಂಜಾನೆ ಕುಡಿದ ಅಮಲಿನಲ್ಲಿದ್ದ ಗೋವಿಂದ, ಅಭಿಷೇಕ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಹಿತಿ ಪಡೆದ ತಕ್ಷಣ ಮಲ್ಪೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಅನಿಲ್ ಕುಮಾರ್ ಡಿ. ಅವರು ಸಿಬ್ಬಂದಿಗಳಾದ ಹೆಚ್‌ಸಿ ಆದರ್ಶ ಹಾಗೂ ಪಿಸಿ ಕುಬೇರ ಅವರೊಂದಿಗೆ ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಸಿದರು. ಉಡುಪಿಗೆ ತೆರಳಿದ್ದ ಪೊಲೀಸರು, ಹೈದರಾಬಾದ್ ಅಥವಾ ಮುಂಬೈಗೆ ರೈಲಿನಲ್ಲಿ ಪರಾರಿಯಾಗಲು ರೈಲು ನಿಲ್ದಾಣದತ್ತ ತೆರಳುತ್ತಿದ್ದ ಗೋವಿಂದನನ್ನು ವಶಕ್ಕೆ ಪಡೆದಿದ್ದಾರೆ.

ವಿಚಾರಣೆ ವೇಳೆ ಗೋವಿಂದ ಕಳೆದ ಸುಮಾರು 15 ವರ್ಷಗಳಿಂದ ಮನೆಗೆ ತೆರಳದೆ ಮುಂಬೈ, ಹೈದರಾಬಾದ್ ಸೇರಿದಂತೆ ವಿವಿಧೆಡೆ ಕೆಲಸ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ.

ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಗೋವಿಂದ ರಾಜುವನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *