Breaking
25 Aug 2026, Tue

ಬಡವರಿಗೆ ವಸತಿ, ನಿವೇಶನ ಕಲ್ಪಿಸಲು ವಿಫಲ: ಲಾಯಿಲ ಗ್ರಾ.ಪಂ. ವಿರುದ್ಧ ಗ್ರಾಮಸ್ಥರ ಆಕ್ರೋಶ

ಬೆಳ್ತಂಗಡಿ: ವಾರ್ಡ್ ಸಭೆ ಹಾಗೂ ಗ್ರಾಮ ಸಭೆಗಳು ಕೇವಲ ಕಾಟಾಚಾರಕ್ಕೆ ಸೀಮಿತವಾಗಿದ್ದು, ಸಭೆಗಳಲ್ಲಿ ಗ್ರಾಮಸ್ಥರು ಮಂಡಿಸುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯುತ್ತಿಲ್ಲ ಎಂದು ಆರೋಪಿಸಿ ಲಾಯಿಲ ಗ್ರಾಮ ಪಂಚಾಯತ್‌ನ 1ನೇ ವಾರ್ಡಿನ ಗ್ರಾಮಸ್ಥರು ಪಂಚಾಯತ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನೇತಾಜಿ ಬಡಾವಣೆ ಅಕ್ರಮ ಸೇರಿದಂತೆ 2010ರಿಂದ 2026ರವರೆಗಿನ ಅವ್ಯವಹಾರಗಳ ಸಮಗ್ರ ಲೋಕಾಯುಕ್ತ ತನಿಖೆಗೆ ಆಗ್ರಹ.

ಲಾಯಿಲ ಗ್ರಾಮದ ಪಡ್ಲಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆ.24ರಂದು ನಡೆದ ವಾರ್ಡ್ ಸಭೆಯಲ್ಲಿ ಈ ಕುರಿತು ವ್ಯಾಪಕ ಚರ್ಚೆ ನಡೆಯಿತು. ಸ್ಥಳೀಯ ಸತೀಶ್ ನಿನ್ನಿಕಲ್ಲು ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಹಿಂದಿನ ವಾರ್ಡ್ ಸಭೆಗಳಲ್ಲಿ ಮಂಡಿಸಿದ್ದ ಬೇಡಿಕೆಗಳು ಹಾಗೂ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.

“ಜನರ ಸಮಸ್ಯೆಗಳು ಹಾಗೆಯೇ ಉಳಿದಿರುವಾಗ ವಾರ್ಡ್ ಸಭೆ, ಗ್ರಾಮ ಸಭೆಗಳನ್ನು ನಡೆಸುವುದರಿಂದ ಏನು ಪ್ರಯೋಜನ?” ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ಪ್ರಶ್ನಿಸಿದರು. ಹಿಂದಿನ ಸಭೆಗಳಲ್ಲಿ ಹಲವು ಬಾರಿ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದರೂ ಅವುಗಳಿಗೆ ಶಾಶ್ವತ ಪರಿಹಾರ ದೊರೆತಿಲ್ಲ.

ಹೀಗಾಗಿ ಸಭೆಗಳು ಕೇವಲ ಕಾಟಾಚಾರಕ್ಕೆ ನಡೆಯುತ್ತಿವೆ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡಿದೆ. ನಮ್ಮ ಸಮಸ್ಯೆಗಳಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಎಷ್ಟು ಸ್ಪಂದಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೇತಾಜಿ ಬಡಾವಣೆ ಅಕ್ರಮದ ತನಿಖೆಗೆ ಆಗ್ರಹ

ನೇತಾಜಿ ಬಡಾವಣೆಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಗೊಂದಲ ಹಾಗೂ ಅವ್ಯವಹಾರದ ಆರೋಪಗಳು ಕೇಳಿಬರುತ್ತಿದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದರು.

ಅಧಿಕೃತ ವಾರಸುದಾರರಿಲ್ಲದಿರುವುದು, ಕೆಲವರು ಮನೆ ನಿರ್ಮಿಸಿ ಬಾಡಿಗೆಗೆ ನೀಡಿರುವುದು ಹಾಗೂ ನಿವೇಶನಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿರುವ ಆರೋಪಗಳ ಬಗ್ಗೆ ಹಲವು ಬಾರಿ ಚರ್ಚೆ ನಡೆದಿದ್ದರೂ ಕ್ರಮವಾಗಿಲ್ಲ ಎಂದು ಆರೋಪಿಸಿದರು.

ಬಡವರಿಗೆ ವಸತಿ ಹಾಗೂ ನಿವೇಶನ ಒದಗಿಸುವಲ್ಲಿ ಪಂಚಾಯತ್ ವಿಫಲವಾಗಿದೆ. ಸರ್ಕಾರಿ ಜಾಗದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣವಾಗುತ್ತಿರುವ ಬಗ್ಗೆ ದೂರು ನೀಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಲಾಯಿಲ ಗ್ರಾಮ ಪಂಚಾಯತ್‌ನಲ್ಲಿ 2010ರಿಂದ 2026ರವರೆಗೆ ನಡೆದಿರುವ ಎಲ್ಲ ಕಾಮಗಾರಿಗಳು, ಹಣಕಾಸು ವ್ಯವಹಾರಗಳು ಹಾಗೂ ಆಡಳಿತಾತ್ಮಕ ನಿರ್ಧಾರಗಳ ಕುರಿತು ಲೋಕಾಯುಕ್ತರಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಬಸ್ ಸೌಲಭ್ಯಕ್ಕೆ ಒತ್ತಾಯ

ಅಗಳಿ, ಹಂದೆವೂರು, ನಿನ್ನಿಕಲ್ಲು ಸೇರಿದಂತೆ ವಿವಿಧ ಪ್ರದೇಶಗಳಿಂದ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿನಿತ್ಯ ಬೆಳ್ತಂಗಡಿ ಸೇರಿದಂತೆ ವಿವಿಧೆಡೆ ಸಂಚರಿಸುತ್ತಿದ್ದಾರೆ. ಸೂಕ್ತ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ತೊಂದರೆಯಾಗುತ್ತಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಈ ಹಿನ್ನೆಲೆಯಲ್ಲಿ ಬೆಳಗ್ಗೆ ಹಾಗೂ ಸಂಜೆ ಬೆಳ್ತಂಗಡಿ – ಲಾಯಿಲ – ನಿನ್ನಿಕಲ್ಲು – ಚಂದ್ಕೂರು – ಕುತ್ರೊಟ್ಟು – ಉಜಿರೆ – ಧರ್ಮಸ್ಥಳ ಮಾರ್ಗದಲ್ಲಿ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ರಸ್ತೆ, ಚರಂಡಿ, ಬೀದಿದೀಪ ದುರಸ್ತಿಗೆ ಆಗ್ರಹ

ದರ್ಪಿಂಜದಿಂದ ನಿನ್ನಿಕಲ್ಲು, ಹಂದೆವೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಬೀದಿದೀಪ ಅಳವಡಿಸಬೇಕು. ಲಾಯಿಲ ಬೈಲು, ಬಜಕ್ರೆಸಾಲು, ಪಡ್ಲಾಡಿ–ಕುಂಡಡ್ಕ, ಆಯಿಲ ರಸ್ತೆ ಸೇರಿದಂತೆ ವಾರ್ಡಿನ ವಿವಿಧ ರಸ್ತೆಗಳನ್ನು ಹಾಗೂ ಚರಂಡಿ ವ್ಯವಸ್ಥೆಯನ್ನು ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಲಾಯಿತು.

ಹಾಲಿನ ಡಿಪೋ ಸಮೀಪದ ಸರ್ಕಾರಿ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಅನಧಿಕೃತ ಕಟ್ಟಡವನ್ನು ತೆರವುಗೊಳಿಸಿ, ಆ ಜಾಗವನ್ನು ಸಾರ್ವಜನಿಕ ಗ್ರಂಥಾಲಯ ನಿರ್ಮಾಣಕ್ಕೆ ಮೀಸಲಿಡಬೇಕು ಎಂದು ಆಗ್ರಹಿಸಲಾಯಿತು. ಈ ಕುರಿತು ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದರಿಂದ ಶೀಘ್ರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದರು.

ಸಭೆಯಲ್ಲಿ ಪಡ್ಲಾಡಿ ಶಾಲೆ ದುರಸ್ತಿ, ರಂಗಮಂದಿರ ನಿರ್ಮಾಣ, ನಿನ್ನಿಕಲ್ಲು ಬಳಿ ಸಾರ್ವಜನಿಕ ತಂಗುದಾಣ ನಿರ್ಮಾಣ, ಪುದ್ದೊಟ್ಟು, ಅಂಕಾಜೆ ಸೇರಿದಂತೆ ವಿವಿಧೆಡೆ ಅಪಾಯಕಾರಿ ಮರಗಳ ತೆರವು ಸೇರಿದಂತೆ ವಾರ್ಡಿನ ಹಲವು ಸಮಸ್ಯೆಗಳು ಹಾಗೂ ಅಭಿವೃದ್ಧಿ ವಿಚಾರಗಳ ಕುರಿತು ಚರ್ಚಿಸಲಾಯಿತು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರಾನಾಥ್ ನಾಯ್ಕ, ಲೆಕ್ಕ ಸಹಾಯಕಿ ಸುಪ್ರಿತಾ ಶೆಟ್ಟಿ, ಸಿಬ್ಬಂದಿ ಉಷಾ ಸೂರಪ್ಪ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *