Breaking
25 Aug 2026, Tue

ಬರಾಯಕೆರೆ ಗಣಿಗಾರಿಕೆ ವಿವಾದ: ಅಧಿಕಾರಿಗಳಿಂದ ಜಂಟಿ ತನಿಖೆ; ಅನುಮತಿ ಷರತ್ತು ಉಲ್ಲಂಘನೆ ಪರಿಶೀಲನೆ

ಬೆಳ್ತಂಗಡಿ: ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿಲ್ಯ ಗ್ರಾಮದ ಐತಿಹಾಸಿಕ ಬರಾಯಕೆರೆ ಪ್ರದೇಶದಲ್ಲಿ ನಡೆಯುತ್ತಿರುವ ಕಪ್ಪು ಕಲ್ಲಿನ ಗಣಿಗಾರಿಕೆ ಕುರಿತು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ, ಕಂದಾಯ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಜಂಟಿ ತನಿಖೆ ನಡೆಸಿದರು.

ಬರಾಯಕೆರೆ ಸಂರಕ್ಷಣಾ ಸಮಿತಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹಾಗೂ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಅವರಿಗೆ ಮನವಿ ಸಲ್ಲಿಸಿದ ಬಳಿಕ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಸ್ಥಳೀಯ ಭೂಮಾಲೀಕ ಹಾಗೂ ನ್ಯಾಯವಾದಿ ಶ್ರೀಕಾಂತ್ ಭಟ್ ಅವರು ಕೃಷಿ ಚಟುವಟಿಕೆಗಾಗಿ ಕಳೆದ 25ಕ್ಕೂ ಹೆಚ್ಚು ವರ್ಷಗಳಿಂದ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಕಾನೂನುಬಾಹಿರವಾಗಿ ಸ್ಫೋಟಕಗಳನ್ನು ಬಳಸುತ್ತಿರುವುದರಿಂದ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಮನೆಗಳು ಬಿರುಕು ಬಿಟ್ಟಿದ್ದು, ಕೃಷಿ ಚಟುವಟಿಕೆಗಳಿಗೆ ಕಲ್ಲು ಹಾಗೂ ಕಲ್ಲಿನ ಪುಡಿಯಿಂದ ಹಾನಿಯಾಗುತ್ತಿದೆ. ಬೃಹತ್ ಲಾರಿಗಳ ಸಂಚಾರದಿಂದ ಗ್ರಾಮ ಪಂಚಾಯತ್ ರಸ್ತೆಗಳು ಹಾಗೂ ಮೋರಿಗಳು ಹಾನಿಗೀಡಾಗಿವೆ. ಐತಿಹಾಸಿಕ ಬರಾಯಕೆರೆ ಕೂಡ ಕಲುಷಿತಗೊಂಡಿದೆ ಎಂದು ಸಮಿತಿ ಆರೋಪಿಸಿತ್ತು.

ಈ ಹಿನ್ನೆಲೆಯಲ್ಲಿ ತಾಲೂಕು ತಹಶೀಲ್ದಾರ್ ಹಾಗೂ ಬೆಳ್ತಂಗಡಿ ಡಿವೈಎಸ್ಪಿ ಪ್ರತ್ಯೇಕವಾಗಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದರು.

ಸೋಮವಾರ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಪವನ್ ವಿ., ಕಿರಿಯ ಅಭಿಯಂತರ ಯಶವಂತ್ ಎಸ್., ಬೆಳ್ತಂಗಡಿ ತಹಶೀಲ್ದಾರ್ ಎನ್.ಎಸ್. ನರಗುಂದ, ವೇಣೂರು ಕಂದಾಯ ನಿರೀಕ್ಷಕ ಕುಮಾರಸ್ವಾಮಿ, ಪಿಲ್ಯ ಗ್ರಾಮಾಡಳಿತಾಧಿಕಾರಿ ಭಾರತಿ, ಮಹಾತ್ಮ ಗಾಂಧಿ ಅಳದಂಗಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಹಾಗೂ ಕಾರ್ಯದರ್ಶಿ ಪೂವಪ್ಪ ಮಲೆಕುಡಿಯ ಸ್ಥಳಕ್ಕೆ ಭೇಟಿ ನೀಡಿ ಗಣಿಗಾರಿಕಾ ಪ್ರದೇಶ ಪರಿಶೀಲಿಸಿದರು.

ಗಣಿಗಾರಿಕಾ ಅನುಮತಿಯ ಷರತ್ತುಗಳ ಉಲ್ಲಂಘನೆ ಹಾಗೂ ಅಕ್ರಮ ಸ್ಫೋಟಕ ಬಳಕೆ ಕುರಿತಂತೆ ಪರಿಶೀಲನೆ ನಡೆಸಿ, ಗಣಿಗಾರಿಕೆ ರದ್ದುಪಡಿಸುವಂತೆ ಸಾರ್ವಜನಿಕ ಮಹಜರು ಕಾರ್ಯ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಬರಾಯಕೆರೆ ಸಂರಕ್ಷಣಾ ಸಮಿತಿ ಮುಖಂಡರಾದ ಪ್ರಶಾಂತ್ ವೇಗಸ್, ಲಿಯೋ ಪಿರೇರಾ, ಹರೀಶ್ ಪೂಜಾರಿ, ಪ್ರವೀಣ್ ನಿನ್ನಿಕಲ್ಲು, ಜೋನ್ ಡಿಸೋಜ, ಸುಬ್ರಹ್ಮಣ್ಯ ಮಡಿವಾಳ, ವಿಶ್ವನಾಥ್ ಪಿಲ್ಯ, ಜೋಕಿಂ ಡಿಸೋಜ, ಕೂಸ ಅಳದಂಗಡಿ, ಗಣೇಶ್ ದೇವಾಡಿಗ, ದಿನೇಶ್ ಪೂಜಾರಿ, ಪ್ರಶಾಂತ್ ಪೂಜಾರಿ, ಉಮೇಶ್ ಪೂಜಾರಿ, ಶರತ್ ಪೂಜಾರಿ, ರಘು ಪೂಜಾರಿ ಸೇರಿದಂತೆ ಹಲವು ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *