ವೇಣೂರು: ದಲಿತ ಸಮುದಾಯದ ಕಾರ್ಯಚಟುವಟಿಕೆಗಳಿಗಾಗಿ 1955ರಲ್ಲಿ ನಿರ್ಮಿಸಲಾಗಿದ್ದ ಸಮುದಾಯ ಭವನವನ್ನು ಸಮಾಜ ಕಲ್ಯಾಣ ಇಲಾಖೆಯ ಪೂರ್ವಾನುಮತಿ ಪಡೆಯದೆ ಕಾನೂನುಬಾಹಿರವಾಗಿ ಧ್ವಂಸಗೊಳಿಸಲಾಗಿದೆ ಎಂದು ಆರೋಪಿಸಿ ವೇಣೂರು ಗ್ರಾಮ ಪಂಚಾಯತ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ವೇಣೂರು ಗ್ರಾಮದ ಸರ್ವೆ ನಂ. 76/2A3ರ 0.06 ಎಕರೆ ಜಮೀನಿನಲ್ಲಿ ಅಂದಿನ ರಾಜ್ಯ ಸರ್ಕಾರ ದಲಿತ ಸಮುದಾಯದ ಕಾರ್ಯಚಟುವಟಿಕೆಗಳಿಗಾಗಿ 1955ರಲ್ಲಿ ಈ ಸಮುದಾಯ ಭವನ ನಿರ್ಮಿಸಿತ್ತು. ಅಂದಿನ ಸಚಿವ ಭಕ್ತವತ್ಸಲಂ ಅವರು 1955ರ ಏಪ್ರಿಲ್ 22ರಂದು ಕಟ್ಟಡವನ್ನು ಉದ್ಘಾಟಿಸಿದ್ದರು ಎನ್ನಲಾಗಿದೆ.

ಸಮುದಾಯ ಭವನದಲ್ಲಿ ಸಭೆ, ಸಮಾರಂಭ, ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು, ಕಟ್ಟಡದ ಒಂದು ಭಾಗದಲ್ಲಿ ಮಂಡಲ ಪಂಚಾಯತ್ ಹಾಗೂ ಗ್ರಾಮಕರಣಿಕರ ಕಚೇರಿಯೂ ಕಾರ್ಯನಿರ್ವಹಿಸುತ್ತಿತ್ತು.
ಆದರೆ ಇದೀಗ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಸಮಾಜ ಕಲ್ಯಾಣ ಇಲಾಖೆಯ ಪೂರ್ವಾನುಮತಿ ಪಡೆಯದೆ ಏಕಪಕ್ಷೀಯವಾಗಿ ಕಟ್ಟಡವನ್ನು ಸಂಪೂರ್ಣ ಧ್ವಂಸಗೊಳಿಸಿದೆ ಎಂದು ದಸಂಸ (ಅಂಬೇಡ್ಕರ್ ವಾದ) ಬೆಳ್ತಂಗಡಿ ತಾಲೂಕು ಸಂಘಟನಾ ಸಂಚಾಲಕ ವಿಜಯ ಕುಮಾರ್ ಬಜಿರೆ ಆರೋಪಿಸಿದ್ದಾರೆ.

ಈ ಕುರಿತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ಮನವಿ ಸಲ್ಲಿಸಿ, ಕಟ್ಟಡ ಧ್ವಂಸಕ್ಕೆ ಕಾರಣರಾದ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಸಮುದಾಯ ಭವನವು ಸಾವಿರಾರು ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದು, ದಲಿತ ಸಮುದಾಯದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿತ್ತು. ಕಟ್ಟಡವನ್ನು ಧ್ವಂಸಗೊಳಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಉಂಟುಮಾಡುವುದರ ಜತೆಗೆ ದಲಿತ ಸಮುದಾಯದ ಅಸ್ಮಿತೆ ಮತ್ತು ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿಜಯ ಕುಮಾರ್ ಬಜಿರೆ ಆಗ್ರಹಿಸಿದ್ದಾರೆ.



