ಉಡುಪಿ: ಮನೆಯ ಶೆಡ್ ನಲ್ಲಿ ನಿಲ್ಲಿಸಲಾಗಿದ್ದ ಎಲೆಕ್ಟ್ರಿಕ್ ರಿಕ್ಷಾ ಏಕಾಏಕಿ ಹೊತ್ತಿ ಉರಿದು, ಪಕ್ಕದಲ್ಲಿದ್ದ ಕಾರು ಹಾಗೂ ಸ್ಕೂಟರ್ ಗೂ ಬೆಂಕಿ ವ್ಯಾಪಿಸಿದ ಘಟನೆ ಪೆರಂಪಳ್ಳಿ ಸಮೀಪ ನಡೆದಿದೆ. ಈ ವೇಳೆ ಸಮಯಪ್ರಜ್ಞೆ ಮೆರೆದ ಇಬ್ಬರು ಯುವಕರು ಬೆಂಕಿ ಮತ್ತಷ್ಟು ವ್ಯಾಪಿಸುವುದನ್ನು ತಡೆದು ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.

ಬೆಳಗ್ಗೆ ಸುಮಾರು 11 ಗಂಟೆ ವೇಳೆಗೆ ಮನೆಯ ಶೆಡ್ ನಲ್ಲಿ ನಿಲ್ಲಿಸಲಾಗಿದ್ದ ಎಲೆಕ್ಟ್ರಿಕ್ ರಿಕ್ಷಾದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲೇ ಬೆಂಕಿ ತೀವ್ರಗೊಂಡು ಪಕ್ಕದಲ್ಲಿದ್ದ ಎಂಜಿ ಕಾರು ಹಾಗೂ ಸ್ಕೂಟರ್ ಗೂ ವ್ಯಾಪಿಸತೊಡಗಿದೆ.

ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದ ಮನೆಯ ಯಜಮಾನರು ಬೆಂಕಿಯನ್ನು ಕಂಡು ಆತಂಕಗೊಂಡು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಈ ವೇಳೆ ವಾಹನಗಳಿಂದ ಬೆಂಕಿ ಮತ್ತಷ್ಟು ವ್ಯಾಪಿಸುವ ಸಾಧ್ಯತೆ ಎದುರಾಗಿತ್ತು.
ಅದೇ ಸಂದರ್ಭದಲ್ಲಿ ಸಮೀಪದ ಕಟ್ಟಡ ನಿರ್ಮಾಣ ಸ್ಥಳದಿಂದ ಹಿಂದಿರುಗುತ್ತಿದ್ದ ಇಂಜಿನಿಯರ್ ಮನೋಜ್ ಅವರು ಬೆಂಕಿಯನ್ನು ಗಮನಿಸಿ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಬೆಂಕಿ ನಿಯಂತ್ರಿಸಲು ಮುಂದಾದರು.

ಇದೇ ವೇಳೆ ಮನೆಗೆ ಅಗತ್ಯ ವಸ್ತುಗಳನ್ನು ಕೊಂಡೊಯ್ಯುತ್ತಿದ್ದ ಹಿಮವರ್ಣಂ ಏಷ್ಯನ್ ಪೇಂಟ್ಸ್ ನ ಯುವ ಉದ್ಯಮಿ ಶರತ್ ಅವರೂ ಬೆಂಕಿ ಕಾಣಿಸಿಕೊಂಡಿರುವುದನ್ನು ಗಮನಿಸಿ ಸ್ಥಳಕ್ಕೆ ಧಾವಿಸಿದ್ದಾರೆ. ಇಬ್ಬರೂ ಯುವಕರು ಯಾವುದೇ ವಿಳಂಬವಿಲ್ಲದೆ ರಕ್ಷಣಾ ಕಾರ್ಯಕ್ಕೆ ಮುಂದಾದರು.

ಮೊದಲು ಬೆಂಕಿ ತಗುಲಿದ್ದ ಎಂಜಿ ಕಾರನ್ನು ಸುರಕ್ಷಿತವಾಗಿ ಹೊರತೆಗೆದು ಹೆಚ್ಚಿನ ಹಾನಿಯಾಗುವುದನ್ನು ತಪ್ಪಿಸಿದರು. ಬಳಿಕ ಸ್ಥಳೀಯವಾಗಿ ಲಭ್ಯವಿದ್ದ ನೀರು, ಮಣ್ಣು ಸೇರಿದಂತೆ ವಿವಿಧ ಮಾರ್ಗಗಳನ್ನು ಬಳಸಿ ಎಲೆಕ್ಟ್ರಿಕ್ ರಿಕ್ಷಾ ಹಾಗೂ ಸ್ಕೂಟರ್ಗೆ ವ್ಯಾಪಿಸಿದ್ದ ಬೆಂಕಿಯನ್ನು ನಿಯಂತ್ರಿಸಿದರು.

ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಿಸಿದರು. ಇಬ್ಬರು ಯುವಕರ ಸಮಯಪ್ರಜ್ಞೆ ಹಾಗೂ ಧೈರ್ಯದಿಂದಾಗಿ ಸಂಭವಿಸಬಹುದಾಗಿದ್ದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.


