ವಿಜಯಪುರ: ನಗರದ ಹೊರವಲಯದ ಐತಿಹಾಸಿಕ ಭೂತನಾಳ ಕೆರೆಯಲ್ಲಿ ನಾಪತ್ತೆಯಾಗಿದ್ದ ತಾಯಿ ಹಾಗೂ ಐವರು ಮಕ್ಕಳ ಮೃತದೇಹಗಳು ಬುಧವಾರ (ಆ.26) ಪತ್ತೆಯಾಗಿದ್ದು, ಘಟನೆ ಭಾರೀ ಆತಂಕ ಮೂಡಿಸಿದೆ.

ಕೌಟುಂಬಿಕ ಕಲಹದಿಂದಾಗಿ ಮೂವರು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ತಿಕೋಟಾ ತಾಲೂಕಿನ ತೊರವಿ ಗ್ರಾಮದ ಶಾಂತಿನಗರ ನಿವಾಸಿ ಶೋಭಾ ಮಲ್ಲಿಕಾರ್ಜುನ ಜಾಲಗೇರಿ (35) ಹಾಗೂ ಅವರ ಮಕ್ಕಳಾದ ವಿದ್ಯಾ (15), ಸುವರ್ಣಾ (13), ಸಾನಿಕಾ (10), ತಿಪ್ಪರಾಯ (12) ಮತ್ತು ವಿಕಾಸ (6) ಮೃತರು ಎಂದು ಗುರುತಿಸಲಾಗಿದೆ.

ಕುಟುಂಬದಲ್ಲಿ ಉಂಟಾದ ಕಲಹದ ಹಿನ್ನೆಲೆಯಲ್ಲಿ ಶೋಭಾ ಮಕ್ಕಳೊಂದಿಗೆ ಕೆರೆಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಸಾವಿಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.
ಬುಧವಾರ ಬೆಳಗ್ಗೆ ಸುಮಾರು 8 ಗಂಟೆಗೆ ಭೂತನಾಳ ಕೆರೆ ಬಳಿ ವಾಕಿಂಗ್‌ಗೆ ಬಂದಿದ್ದ ಸ್ಥಳೀಯರು ನೀರಿನಲ್ಲಿ ಮೃತದೇಹಗಳು ತೇಲುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಎರಡು ದಿನಗಳ ಹಿಂದೆಯೇ ಆರು ಮಂದಿ ಕೆರೆಗೆ ಬಿದ್ದಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಮೃತದೇಹಗಳನ್ನು ಬಿಎಲ್‌ಡಿಇ ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಪತಿ ಬುದ್ಧಿಮಾತು ಹೇಳಿದ್ದಕ್ಕೆ ಮನೆಯಿಂದ ಹೊರಬಂದಿದ್ದ ಮಹಿಳೆ:
ಆ.23ರ ರಾತ್ರಿ ಶೋಭಾ ಹಾಗೂ ಅವರ ಪತಿ ಮಲ್ಲಿಕಾರ್ಜುನ ಜಾಲಗೇರಿ ನಡುವೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಶ್ರಾವಣ ಸೋಮವಾರದಂದು ಬೇಗನೆ ಎದ್ದು ಪೂಜೆ ಸಲ್ಲಿಸಿ, ಬಳಿಕ ಅಡುಗೆ ಮಾಡುವಂತೆ ಪತಿ ಹೇಳಿದ್ದ ವಿಚಾರಕ್ಕೆ ಇಬ್ಬರ ನಡುವೆ ಸಣ್ಣಪುಟ್ಟ ತಕರಾರು ನಡೆದಿತ್ತು.
ಬಳಿಕ ಮಲ್ಲಿಕಾರ್ಜುನ ಮನೆಯ ಹೊರಗೆ ಮಲಗಿದ್ದು, ಶೋಭಾ ಮಕ್ಕಳೊಂದಿಗೆ ಮನೆಯೊಳಗೆ ಮಲಗಿದ್ದರು. ಆ.24ರ ಬೆಳಗ್ಗೆ ಎದ್ದು ನೋಡಿದಾಗ ಶೋಭಾ ಹಾಗೂ ಮಕ್ಕಳು ಮನೆಯಲ್ಲಿ ಇರಲಿಲ್ಲ. ಗ್ರಾಮದಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪತಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ಮಗ ತಿಪ್ಪರಾಯ ಮೂಕನಾಗಿದ್ದು, ನಗರದ ಶ್ರವಣ ದೋಷ ವಸತಿ ಶಾಲೆಯಲ್ಲಿ ದಾಖಲಿಸಲಾಗಿತ್ತು. ಶ್ರವಣ ದೋಷ ವಸತಿ ಶಾಲೆಯಲ್ಲಿ ದಾಖಲಾಗಿದ್ದು, ಆತನನ್ನೂ ಶೋಭಾ ಕರೆದುಕೊಂಡು ಹೋಗಿರುವುದು ಶಾಲೆಯ ಸಿಬ್ಬಂದಿಯಿಂದ ತಿಳಿದುಬಂದಿತ್ತು ಎಂದು ಪತಿ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದು, ಸಾವಿನ ಹಿಂದಿನ ನಿಖರ ಕಾರಣ ತನಿಖೆಯಿಂದ ಇನ್ನಷ್ಟೇ ಬಯಲಾಗಬೇಕಿದೆ.


