ಬಂಟ್ವಾಳ: “ತುಳುನಾಡಿನ ಆಟಿ ತಿಂಗಳ ಆಹಾರ ಪದ್ಧತಿ ಆರೋಗ್ಯಪೂರ್ಣವಾಗಿದ್ದು, ಈ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಯುವಜನತೆಗೆ ಪರಿಚಯಿಸುವ ಉದ್ದೇಶದಿಂದ ದುಬೈನಲ್ಲೂ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ” ಎಂದು ನಿವೃತ್ತ ಸೇನಾನಿ ಗೋಪಾಲ ಬೋಳಿಯಾರ್ ಹೇಳಿದರು.

ದುಬೈ ಯುಎಇ ಗಾಣಿಗ ಫ್ಯಾಮಿಲಿ ಸಂಘಟನೆ ವತಿಯಿಂದ ದುಬೈ ನೈಟ್ ಕ್ಯಾಸ್ಟಲ್ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ನಡೆದ ‘ಗಾಣಿಗ ಸಂಗಮ-2026’ ಹಾಗೂ ‘ಆಟಿದ ಕಮ್ಯೆನ ಗಾಣಿಗೆರ್ನ ತಮ್ಮನ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಶ್ವಿನ್ ವಾಸು ಪುತ್ತ್ರನ್ ಮುಂಬೈ ಹಾಗೂ ಕೊರಿಯೋಗ್ರಾಫರ್ ಗೌತಮ್ ಬಂಗೇರ ಮಂಗಳೂರು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಯುವ ಕ್ರಿಕೆಟಿಗ ಮಾಸ್ಟರ್ ವ್ಯಾನ್ ಪುತ್ತ್ರನ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಆಟಿ ಕೂಟದ ಸಹಭೋಜನ ನಡೆಯಿತು.

ಕಾರ್ಯಕ್ರಮದಲ್ಲಿ ಕ್ರಿಕೆಟಿಗ ವ್ಯಾನ್ ದುಬೈ, ಕ್ರೀಡಾ ಸಂಚಾಲಕ ರಮೇಶ್ ಸಪಳಿಗ, ಸಾಂಸ್ಕೃತಿಕ ಸಂಚಾಲಕ ಹರ್ಷದ್ ಸಪಳಿಗ ಮತ್ತಿತರರು ಉಪಸ್ಥಿತರಿದ್ದರು.
ಸಮಿತಿ ಸಂಚಾಲಕ ಸುಪ್ರೀತ್ ಗಾಣಿಗ ಮರ್ದೋಳಿ ಸ್ವಾಗತಿಸಿ ವಂದಿಸಿದರು. ಹಿತೇಶ್ ಗಾಣಿಗ ಕೈಕಂಬ ಹಾಗೂ ಕಾರ್ತಿಕ್ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.


