ಬೆಂಗಳೂರು: ಕಂಟೈನರ್‌ಗೆ ಬೀಗ ಹಾಕದೆ ತೆರಳಿದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಕಳ್ಳನೊಬ್ಬ 30 ಲಕ್ಷ ರೂ. ಮೌಲ್ಯದ 130 ಮೊಬೈಲ್‌ಗಳನ್ನು ಕಳವು ಮಾಡಿರುವ ಘಟನೆ ವೈಟ್‌ಫೀಲ್ಡ್‌ನಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಹದೇವಪುರದ ಮೊಹಮ್ಮದ್ ಅಲಿ (43) ಎಂಬಾತನನ್ನು ವೈಟ್‌ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಕಳವು ಮಾಡಿದ್ದ 130 ಮೊಬೈಲ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ.

ಹೈದರಾಬಾದ್‌ನ ಕಾರ್ಗೋ ಕಂಪನಿಯಿಂದ ಬಂದಿದ್ದ ಮೊಬೈಲ್‌ಗಳಿದ್ದ ಪಾರ್ಸಲ್ ಬಾಕ್ಸ್‌ಗಳನ್ನು ನಲ್ಲೂರಹಳ್ಳಿ ಬಳಿಯ ಕಸ್ಟಮ್ಸ್ ಕಚೇರಿ ಪಕ್ಕದ ಖಾಲಿ ಜಾಗದಲ್ಲಿ ಅನ್‌ಲೋಡ್ ಮಾಡುವಂತೆ ಸಿಬ್ಬಂದಿಗೆ ಸೂಚಿಸಲಾಗಿತ್ತು. ಸಿಬ್ಬಂದಿ ಪಾರ್ಸಲ್‌ಗಳನ್ನು ಅನ್‌ಲೋಡ್ ಮಾಡಿದ ಬಳಿಕ ಕಂಟೈನರ್‌ಗೆ ಬೀಗ ಹಾಕದೆ ಸ್ಥಳದಿಂದ ತೆರಳಿದ್ದರು.

ಈ ವೇಳೆ ಅವಕಾಶ ಬಳಸಿಕೊಂಡ ಆರೋಪಿ, ಮೊಬೈಲ್‌ಗಳಿದ್ದ ಮೂರು ಪಾರ್ಸಲ್ ಬಾಕ್ಸ್‌ಗಳನ್ನು ಕಳವು ಮಾಡಿಕೊಂಡು ಆಟೋರಿಕ್ಷಾದಲ್ಲಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಸ್ವಲ್ಪ ಸಮಯದ ಬಳಿಕ ಸ್ಥಳಕ್ಕೆ ಮರಳಿದ ಸಿಬ್ಬಂದಿಗೆ ಮೂರು ಪಾರ್ಸಲ್ ಬಾಕ್ಸ್‌ಗಳು ನಾಪತ್ತೆಯಾಗಿರುವುದು ಗೊತ್ತಾಗಿದೆ. ಕೂಡಲೇ ಕಂಪನಿ ಮಾಲೀಕರು ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರು ಆಧರಿಸಿ ತನಿಖೆ ಆರಂಭಿಸಿದ ಪೊಲೀಸರು, ಮಾಹಿತಿ ಕಲೆಹಾಕಿ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.




