ಕಲ್ಲಡ್ಕ : ಸಮಾಜದ ಪ್ರಗತಿಗೆ ಶಿಕ್ಷಣವೇ ಪ್ರಮುಖ ಸಾಧನವೆಂದು ಅರಿತಿದ್ದ ಬ್ರಹ್ಮಶ್ರೀ ನಾರಾಯಣಗುರುಗಳು, ವಿದ್ಯೆಗೆ ವಿಶೇಷ ಆದ್ಯತೆ ನೀಡುವ ಮೂಲಕ ಸಾಮಾಜಿಕ ಪರಿವರ್ತನೆಗೆ ಅಡಿಪಾಯ ಹಾಕಿದರು ಎಂದು ಶಿಕ್ಷಕ ಸಂತೋಷ್ ಎಸ್. ಸನಿಲ್ ಹೇಳಿದರು.

ಅಕ್ಟೋಬರ್ 11 ಭಾನುವಾರ ನೇರಳಕಟ್ಟೆ ಬಾಡಾರಿನ ಮೂಲದ ಕೊರಗಲ್ಲು ಕೊರಗಜ್ಜ ಗುಳಿಗ ಕ್ಷೇತ್ರದಲ್ಲಿ, ಹರಿಣಾಕ್ಷಿ ರಮೇಶ್ ಕುಡ್ಮೇರು ಅವರ ಆತಿಥ್ಯದಲ್ಲಿ ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ಆಯೋಜಿಸಲಾದ ‘ಗುರುತತ್ವವಾಹಿನಿ’ ಮಾಲಿಕೆ 82ರಲ್ಲಿ ಅವರು ಗುರುಸಂದೇಶ ನೀಡಿದರು.

ಸಮಾಜದಲ್ಲಿ ನೆಲೆಸಿದ್ದ ಅಜ್ಞಾನ, ಅಸಮಾನತೆ ಹಾಗೂ ಮೂಢನಂಬಿಕೆಗಳನ್ನು ದೂರಗೊಳಿಸಿ, ಜನರು ಸ್ವಾಭಿಮಾನದಿಂದ ಬದುಕಬೇಕಾದರೆ ಶಿಕ್ಷಣ ಅತ್ಯಗತ್ಯ ಎಂಬುದನ್ನು ನಾರಾಯಣಗುರುಗಳು ತಮ್ಮ ಕಾರ್ಯಗಳ ಮೂಲಕ ತೋರಿಸಿಕೊಟ್ಟರು. ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ; ಅದು ವ್ಯಕ್ತಿಯ ಜ್ಞಾನ, ಚಿಂತನೆ, ವ್ಯಕ್ತಿತ್ವ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಶಕ್ತಿಯಾಗಿದೆ. ವಿದ್ಯಾವಂತರಾದಾಗ ಮಾತ್ರ ಸಮಾಜದಲ್ಲಿ ಸಮಾನತೆ, ಸಹೋದರತೆ ಮತ್ತು ಮಾನವೀಯ ಮೌಲ್ಯಗಳನ್ನು ಬಲಪಡಿಸಲು ಸಾಧ್ಯ ಎಂಬ ಸಂದೇಶವನ್ನು ನಾರಾಯಣಗುರುಗಳು ಸಾರಿದರು ಎಂದರು.

ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಉಪಾಧ್ಯಕ್ಷ ಹರೀಶ್ ಸಾಲ್ಯಾನ್ ಅಜಕಲ, ಕೋಶಾಧಿಕಾರಿ ಪ್ರಜಿತ್ ಅಮೀನ್ ಏರಮಲೆ, ವಂದಿಸಿದರು.ಸಾಂಸ್ಕೃತಿಕ ನಿರ್ದೇಶಕ ನವೀನ್ ಕುಡ್ಮೇರು ಉಪಸ್ಥಿತರಿದ್ದರು.

ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಮಹೇಶ್ ಬೊಳ್ಳಾಯಿ ವಂದಿಸಿದರು..ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ಪೂಂಜರೆಕೋಡಿ ಕಾರ್ಯಕ್ರಮ ನಿರೂಪಿಸಿದರು.


