Breaking
13 Oct 2026, Tue

ಪೊಳಲಿ 31ನೇ ಯಕ್ಷೋತ್ಸವ: ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ದಂಪತಿಗೆ ಪ್ರಶಸ್ತಿ ಪ್ರದಾನ

ಬಂಟ್ವಾಳ: ಯಕ್ಷಗಾನ ಮೇಳಗಳ ಯಜಮಾನಿಕೆ ನಡೆಸುವ ಮೂಲಕ ಕಳೆದ 90 ವರ್ಷಗಳಿಂದ ಯಕ್ಷಗಾನ ಕ್ಷೇತ್ರಕ್ಕೆ ಕೊಡುಗೆ ನೀಡಿದ ಕಲ್ಲಾಡಿ ಮನೆತನದ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಮತ್ತು ಅನುಪಮಾ ಡಿ. ಶೆಟ್ಟಿ ದಂಪತಿಗೆ ಪ್ರಸಕ್ತ ಸಾಲಿನ ‘ಪೊಳಲಿ ಯಕ್ಷೋತ್ಸವ ಪ್ರಶಸ್ತಿ’ ಅರ್ಹವಾಗಿಯೇ ಸಂದಿದೆ ಎಂದು ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ ಹೇಳಿದರು.

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಸಮೀಪ ಹಿರಿಯ ಭಾಗವತ ದಿನೇಶ ಅಮ್ಮಣ್ಣಾಯ ಅವರ ಅಭಿಮಾನಿಗಳು ಮೂರು ದಶಕಗಳ ಹಿಂದೆ ಆರಂಭಿಸಿದ ‘ಪೊಳಲಿ ಯಕ್ಷೋತ್ಸವ’ ಅರ್ಥಪೂರ್ಣ ಕಾರ್ಯಕ್ರಮವಾಗಿ ಬೆಳೆದು ಬಂದಿದೆ ಎಂದು ಅವರು ಅಭಿಪ್ರಾಯಪಟ್ಟರು. ಪೊಳಲಿ ರಾಜಾಂಗಣದಲ್ಲಿ ಭಾನುವಾರ ಸಂಜೆ ನಡೆದ 31ನೇ ವರ್ಷದ ಯಕ್ಷೋತ್ಸವದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಶಾಸಕ ರಾಜೇಶ ನಾಯ್ಕ್ ಉಳಿಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ಹಿಮ್ಮೇಳ ಕಲಾವಿದ ಹರಿನಾರಾಯಣ ಬೈಪಡಿತ್ತಾಯ ಅವರಿಗೆ ‘ದಿನೇಶ ಅಮ್ಮಣ್ಣಾಯ ಸ್ಮೃತಿ ಗೌರವ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಕಲಾವಿದ ಉಜಿರೆ ಅಶೋಕ್ ಭಟ್ ಅಭಿನಂದನಾ ನುಡಿಗಳನ್ನಾಡಿದರು. ಅಗಲಿದ ಕಲಾವಿದರಿಗೆ ರವಿ ಅಲೆವೂರಾಯ ಸಂಸ್ಮರಣೆ ಸಲ್ಲಿಸಿದರು. 15 ಮಂದಿ ಹಿರಿಯ ಕಲಾವಿದರನ್ನು ಗೌರವ ನಿಧಿಯೊಂದಿಗೆ ಸನ್ಮಾನಿಸಲಾಯಿತು.

ಕಲಾ ಪ್ರೋತ್ಸಾಹಕರಾದ ಮೂಡುಬಿದಿರೆಯ ಯಕ್ಷ ಸಂಗಮದ ಶಾಂತಾರಾಮ ಕುಡ್ವ, ಪುಳಿಂಚ ಸೇವಾ ಪ್ರತಿಷ್ಠಾನದ ಶ್ರೀಧರ ಶೆಟ್ಟಿ ಪುಳಿಂಚ ಹಾಗೂ ಸಂಘಟಕ ಜಿ. ರಾಘವೇಂದ್ರ ಪುತ್ತೂರಾಯ ಅವರಿಗೆ ‘ಯಕ್ಷ ಕಲಾ’ ಗೌರವ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಕದ್ರಿ ನವನೀತ ಶೆಟ್ಟಿ ಅಭಿನಂದನಾ ನುಡಿಗಳನ್ನಾಡಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುರೇಂದ್ರ ಪರವ ಕರಿಯಂಗಳ ಅವರನ್ನು ಗೌರವಿಸಲಾಯಿತು.

ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿ, ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಮಂಜಯ ಶೆಟ್ಟಿ ಅಮ್ಮುಂಜೆಗುತ್ತು, ಕೋಡಿಮಜಲು ಅನಂತ ಪದ್ಮನಾಭ ಉಪಾಧ್ಯಾಯ, ಪ್ರಧಾನ ಅರ್ಚಕ ಹಾಗೂ ಅನುವಂಶಿಕ ಮೊಕ್ತೇಸರ ಮಾಧವ ಭಟ್ ಪೊಳಲಿ, ಅರ್ಚಕ ಅನಂತ ಪದ್ಮನಾಭ ಭಟ್, ಕಾರ್ಯನಿರ್ವಹಣಾಧಿಕಾರಿ ಕೆ.ಪಿ. ಚಂದ್ರಮೋಹನ್, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಹಾಗೂ ಕನ್ನರೆ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಪ್ರಭಾಕರ ಡಿ. ಸುವರ್ಣ ಕನ್ನರೆ ಶುಭ ಹಾರೈಸಿದರು.

ಸಮಿತಿಯ ಸಂಸ್ಥಾಪಕ ಅನಭ ಪೊಳಲಿ, ಪ್ರಮುಖರಾದ ಲೋಕೇಶ್ ಭರಣಿ, ಸುಬ್ರಾಯ ಕಾರಂತ, ಮೋಹನ್ ಬಿಲ್ವಪತ್ರೆ ಮತ್ತಿತರರು ಉಪಸ್ಥಿತರಿದ್ದರು. ಸಮಿತಿ ಸಂಚಾಲಕ ವೆಂಕಟೇಶ ನಾವಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಯೋಜಕ ಜನಾರ್ದನ ಅಮ್ಮುಂಜೆ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

31ನೇ ವರ್ಷದ ಯಕ್ಷೋತ್ಸವದ ವಿಶೇಷವಾಗಿ ಜಿಲ್ಲೆಯ ಆಯ್ದ ಕಲಾವಿದರಿಂದ ಭಾನುವಾರ ಬೆಳಗ್ಗಿನಿಂದ ರಾತ್ರಿಯವರೆಗೆ ಒಟ್ಟು 18 ಗಂಟೆಗಳ ಕಾಲ ನಿರಂತರ ಯಕ್ಷಗಾನ ಬಯಲಾಟ ನಡೆಯಿತು. ‘ರಾಜಾ ಯಯಾತಿ’, ‘ಇಂದ್ರಕೀಲಕ’ ಹಾಗೂ ‘ರಾಮಾಂಜನೇಯ’ ಎಂಬ ಮೂರು ಪ್ರಸಂಗಗಳು ಪ್ರದರ್ಶನಗೊಂಡವು.

Leave a Reply

Your email address will not be published. Required fields are marked *