ಬೆಂಗಳೂರು: ಆಹಾರ ಉದ್ದಿಮೆಗಳಲ್ಲಿ ಸುರಕ್ಷತೆ, ಸ್ವಚ್ಛತೆ ಹಾಗೂ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಿದೆ.

ರಾಜ್ಯದ ಎಲ್ಲಾ ಆಹಾರ ಉದ್ದಿಮೆದಾರರು ಹಾಗೂ ಮಾರಾಟಗಾರರು ಕಡ್ಡಾಯವಾಗಿ ಎಫ್‌ಎಸ್‌ಎಸ್‌ಎಐ ಪರವಾನಗಿ ಹೊಂದಿರಬೇಕು. ಆಹಾರದ ಗುಣಮಟ್ಟ ಮತ್ತು ಸುರಕ್ಷತೆ ಕಾಪಾಡುವುದು, ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು, ಕೀಟ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಸಿಬ್ಬಂದಿಯ ವೈಯಕ್ತಿಕ ನೈರ್ಮಲ್ಯ ಕಾಪಾಡುವುದು ಸೇರಿದಂತೆ 12 ಪ್ರಮುಖ ಅಂಶಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಸೂಚಿಸಲಾಗಿದೆ.

ಆಹಾರ ಸುರಕ್ಷತಾ ಅಧಿಕಾರಿಗಳ ಪರಿಶೀಲನೆ ವೇಳೆ ಹಲವು ಉದ್ದಿಮೆಗಳಲ್ಲಿ ನಿಯಮಾನುಸಾರ ಕ್ರಮಗಳನ್ನು ಕೈಗೊಳ್ಳದಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಕಂಡುಬಂದಿರುವ ಲೋಪಗಳನ್ನು ಸರಿಪಡಿಸಿಕೊಳ್ಳಲು ಉದ್ದಿಮೆದಾರರಿಗೆ 15 ದಿನಗಳ ಗಡುವು ನೀಡಲಾಗಿದೆ.

ಈ ಅವಧಿಯೊಳಗೆ ಅಗತ್ಯ ಕ್ರಮಗಳನ್ನು ಕೈಗೊಂಡು, ಆಹಾರ ಉದ್ದಿಮೆಗಳನ್ನು ನಿಗದಿತ ಆಹಾರ ಸುರಕ್ಷತಾ ಮಾನದಂಡಗಳು ಹಾಗೂ ನಿಯಮಾವಳಿಗಳಿಗೆ ಅನುಗುಣವಾಗಿ ನಡೆಸಬೇಕು. ನಿಯಮ ಪಾಲನೆಯಲ್ಲಿ ಯಾವುದೇ ನಿರ್ಲಕ್ಷ್ಯ ತೋರದಂತೆ ಆಹಾರ ಉದ್ದಿಮೆದಾರರಿಗೆ ಇಲಾಖೆ ಸೂಚನೆ ನೀಡಿದೆ.



