ಮಂಗಳೂರು: ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಹೊರಸಂಪನ್ಮೂಲ ನೌಕರರ ಕನಿಷ್ಠ ವೇತನವನ್ನು ತಡೆಹಿಡಿದಿರುವ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಹೊರಸಂಪನ್ಮೂಲ ನೌಕರರು ಕೆಪಿಸಿಸಿ ಕರ್ನಾಟಕ ರಾಜ್ಯ ಕಾರ್ಯಾಧ್ಯಕ್ಷ ರಕ್ಷಿತ್ ಶಿವರಾಂ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯದ ಕಾರ್ಮಿಕ ಇಲಾಖೆಯು ಕಾರ್ಮಿಕರ ಕನಿಷ್ಠ ವೇತನ ಕಾಯ್ದೆ-1948ರ ಅಡಿಯಲ್ಲಿ ಕನಿಷ್ಠ ವೇತನ ಜಾರಿಗೊಳಿಸಲು ಈ ಹಿಂದೆ ಆದೇಶಿಸಿತ್ತು. ಅದರಂತೆ ಜೂನ್ ಹಾಗೂ ಜುಲೈ ತಿಂಗಳ ವೇತನವನ್ನೂ ಪಾವತಿಸಲಾಗಿತ್ತು. ಆದರೆ ಇದೀಗ ರಾಜ್ಯದ ಆರ್ಥಿಕ ಇಲಾಖೆ ಏಕಾಏಕಿ ಕನಿಷ್ಠ ವೇತನ ಪರಿಷ್ಕರಣೆಯನ್ನು ತಡೆಹಿಡಿದಿರುವುದರಿಂದ ಹೊರಸಂಪನ್ಮೂಲ ನೌಕರರಿಗೆ ಅನ್ಯಾಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ತಡೆಹಿಡಿದಿರುವ ಕನಿಷ್ಠ ವೇತನವನ್ನು ಮರು ಜಾರಿಗೊಳಿಸುವಂತೆ ರಾಜ್ಯ ಸರ್ಕಾರದ ಗಮನ ಸೆಳೆದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೌಕರರು ಒತ್ತಾಯಿಸಿದರು. ಮನವಿ ಸ್ವೀಕರಿಸಿದ ರಕ್ಷಿತ್ ಶಿವರಾಂ ಅವರು ಈ ಕುರಿತು ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಇಲಾಖೆಯ ಸಚಿವರೊಂದಿಗೆ ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಹೊರಸಂಪನ್ಮೂಲ ನೌಕರರು ಉಪಸ್ಥಿತರಿದ್ದರು.




