Breaking
1 Sep 2026, Tue

ಮೂಡುಬಿದಿರೆ: 6 ಕಳ್ಳತನ ಪ್ರಕರಣಗಳ ವಾರಂಟ್ ಆರೋಪಿ ಬಂಧನ

ಮೂಡುಬಿದಿರೆ: ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಬಹುಪ್ರಕರಣಗಳ ಆರೋಪಿಯನ್ನು ಮೂಡುಬಿದಿರೆ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಉಪ್ಪಳ್ಳಿಯ ನಿವಾಸಿ, ಪ್ರಸ್ತುತ ಮಂಗಳೂರಿನ ಪಣಂಬೂರು ಸಮೀಪದ ಜೋಕಟ್ಟೆ ಗ್ರಾಮದ ಕೋಡಿಕರೆಯಲ್ಲಿ ವಾಸವಿದ್ದ ಅಬೂಬಕ್ಕರ್ ಅಲಿಯಾಸ್ ಅಬ್ದುಲ್ ಖಾದರ್ ಎಂದು ಗುರುತಿಸಲಾಗಿದೆ.

ಆರೋಪಿಯ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಆರು ಪ್ರತ್ಯೇಕ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ವಾರಂಟ್ ಜಾರಿಗೊಳಿಸಿತ್ತು.

ದೀರ್ಘಕಾಲದಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆತನನ್ನು ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಆ.28ರಂದು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.

ಮೂಡುಬಿದಿರೆ ಠಾಣೆಯ ಹೆಚ್‌ಸಿ ರವೀಂದ್ರ, ಪಿಸಿ ಲಿಂಗೇಶ್ ಹಾಗೂ ಕೋರ್ಟ್ ಪಿಸಿ ರಮೇಶ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿತ್ತು.

ಆರೋಪಿಯನ್ನು ಮೂಡುಬಿದಿರೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಚಾರಣೆ ನಡೆಸಿದ ನ್ಯಾಯಾಧೀಶರು ಸೆ.15ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಬಳಿಕ ಆರೋಪಿಯನ್ನು ಕಾರಾಗೃಹಕ್ಕೆ ಕಳುಹಿಸಲಾಗಿದೆ.

ಆರೋಪಿಯ ವಿರುದ್ಧ ಕಾರ್ಕಳ ಗ್ರಾಮಾಂತರ, ಶಿರ್ವ, ಮುಲ್ಕಿ, ಉಪ್ಪಿನಂಗಡಿ ಹಾಗೂ ಚಿಕ್ಕಮಗಳೂರಿನ ಬಸವನಹಳ್ಳಿ ಪೊಲೀಸ್ ಠಾಣೆಗಳಲ್ಲಿಯೂ ವಿವಿಧ ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಪ್ರಕರಣಗಳ ಕುರಿತು ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *