ಬಂಟ್ವಾಳ: ಮಾಣಿ ಹಾಲು ಉತ್ಪಾದಕರ ಸಹಕಾರಿ ಸಂಘವು 2025-26ನೇ ಸಾಲಿನಲ್ಲಿ ₹3,67,799.92 ಲಾಭ ಗಳಿಸಿದ್ದು, ₹3,68,27,009.62 ವ್ಯವಹಾರ ನಡೆಸಿದೆ. ಸದಸ್ಯರಿಗೆ ಶೇ.10ರಷ್ಟು ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.

ಮಾಣಿ-ವಿದ್ಯಾನಗರ ಪೆರಾಜೆಪಾಳ್ಯದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಸಭಾಭವನದಲ್ಲಿ ಆ.26ರಂದು ನಡೆದ ಸಭೆಯ ಅಧ್ಯಕ್ಷತೆಯನ್ನು ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಟಿ.ಎಚ್. ನಾರಾಯಣ ಭಟ್ ವಹಿಸಿದ್ದರು.

ಕಾರ್ಯದರ್ಶಿ ನಾಗೇಶ ಅವರು ಸಂಘದ ವಾರ್ಷಿಕ ವರದಿ ವಾಚಿಸಿದರು. ವಿಸ್ತರಣಾಧಿಕಾರಿ ಜಗದೀಶ್ ಅವರು ರಾಸುಗಳ ವಿಮೆ, ಹಸಿರು ಹುಲ್ಲಿನ ಮಹತ್ವ ಹಾಗೂ ಹೈನುಗಾರಿಕೆಗೆ ಸಂಬಂಧಿಸಿದ ವಿವಿಧ ಮಾಹಿತಿಗಳನ್ನು ನೀಡಿದರು. ಸಂಘದ ಕಾರ್ಯವೈಖರಿ ಹಾಗೂ ಹೈನುಗಾರರೊಂದಿಗೆ ಹೊಂದಿರುವ ಉತ್ತಮ ಬಾಂಧವ್ಯವನ್ನು ಶ್ಲಾಘಿಸಿದರು.

ಅಧ್ಯಕ್ಷ ಟಿ.ಎಚ್. ನಾರಾಯಣ ಭಟ್ ಮಾತನಾಡಿ, ಹಾಲು ಉತ್ಪಾದಕರು ಸ್ವಚ್ಛ ಹಾಲು ಪೂರೈಸುವ ಮೂಲಕ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಸಂಘದ ಪ್ರಗತಿಗೆ ಸದಸ್ಯರು ನಿರಂತರ ಸಹಕಾರ ನೀಡಬೇಕು ಎಂದರು.

ಸಭೆಯಲ್ಲಿ 45 ವರ್ಷಕ್ಕೂ ಅಧಿಕ ಕಾಲ ಸಂಘಕ್ಕೆ ಹಾಲು ಪೂರೈಸುತ್ತಿರುವ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. 3,000 ಲೀಟರ್‌ಗಿಂತ ಅಧಿಕ ಹಾಲು ಪೂರೈಸಿದ ಸದಸ್ಯರನ್ನು ಗೌರವಿಸಲಾಯಿತು.

ಉಪಾಧ್ಯಕ್ಷ ಸದಾನಂದ ರೈ, ನಿರ್ದೇಶಕರಾದ ಶಿವಶಂಕರ ಭಟ್, ನಾರಾಯಣ ಶೆಟ್ಟಿ, ಬಾಬು ಶೆಟ್ಟಿ, ಜನಾರ್ದನ ಪೆರಾಜೆ, ಸಚ್ಚಿದಾನಂದ ರೈ, ಪ್ರಪುಲ್ಲಾ ರೈ, ಬಾಲಕೃಷ್ಣ ಪೂಜಾರಿ, ಶಿವರಾಮ ಗೌಡ, ಮಹೇಂದ್ರ ಡಿ., ಲಲಿತಾ ಎನ್. ನಾಯ್ಕ, ಸಂಘದ ಕಾರ್ಯನಿರ್ವಹಣಾಧಿಕಾರಿ ಎಂ. ನಾಗೇಶ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಜನಾರ್ದನ ಪೆರಾಜೆ ಸ್ವಾಗತಿಸಿದರು. ಬಾಲಕೃಷ್ಣ ಪೂಜಾರಿ ವಂದಿಸಿದರು.




