Breaking
2 Sep 2026, Wed

ಬಂಟ್ವಾಳ: ನಿಷ್ಕಲ್ಮಶ ಭಕ್ತಿ ಇದ್ದಾಗ ದೇವರನ್ನು ಕಾಣಲು ಸಾಧ್ಯ: ಡಾ. ಧರ್ಮಪಾಲನಾಥ ಸ್ವಾಮೀಜಿ

ಬಂಟ್ವಾಳ: ಶಾಶ್ವತವಾದ ಸುಖ ನಮ್ಮ ಅಂತರಂಗದಲ್ಲಿಯೇ ಇದೆ. ನಿಷ್ಕಲ್ಮಶವಾದ ಮನಸ್ಸು ಹಾಗೂ ಭಕ್ತಿ ಇದ್ದಾಗ ದೇವರನ್ನು ಕಾಣಲು ಸಾಧ್ಯ ಎಂದು ಮಂಗಳೂರಿನ ಶ್ರೀ ಆದಿಚುಂಚನಗಿರಿ ಮಠದ ಡಾ. ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.

ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿ ಆಶ್ರಯದಲ್ಲಿ ಸೇವಾಂಜಲಿ ಸಭಾಗೃಹದಲ್ಲಿ ನಡೆದ 21ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಲಕ್ಷ್ಮೀ ಶಕ್ತಿಯ ಸಂಕೇತವಾಗಿದ್ದು, ನಮ್ಮ ಕರ್ಮ, ಕರ್ತವ್ಯ ಹಾಗೂ ಚಿಂತನೆಯಲ್ಲಿ ಲಕ್ಷ್ಮೀ ವಾಸವಾಗಿರುತ್ತಾಳೆ. ಸಾಮೂಹಿಕವಾಗಿ ನೆರವೇರಿಸುವ ಪೂಜೆ ಶ್ರೇಷ್ಠವಾದ ವ್ರತಾಚರಣೆಯಾಗಿದೆ ಎಂದು ಅವರು ತಿಳಿಸಿದರು.

ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಪ್ರತೀಕ್ಷಾ ರೈ ಜಿ. ಮುಖ್ಯ ಅತಿಥಿಯಾಗಿ ಮಾತನಾಡಿ, ಸಮಾಜದಲ್ಲಿರುವ ಬಡವರ ಸೇವೆ ಮಾಡುವುದು, ಮಕ್ಕಳಿಗೆ ಧರ್ಮ ಹಾಗೂ ಸಂಸ್ಕಾರ ಕಲಿಸುವುದು ಮತ್ತು ಹಿರಿಯರಿಗೆ ಗೌರವ ನೀಡುವ ಸಂಕಲ್ಪವನ್ನು ಈ ದಿನ ಕೈಗೊಳ್ಳಬೇಕು ಎಂದು ಹೇಳಿದರು.

ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿ ಕಾರ್ಯದರ್ಶಿ ಕೃಷ್ಣ ಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದಲ್ಲಿರುವ ಮೇಲು-ಕೀಳು, ಸ್ಪೃಶ್ಯ-ಅಸ್ಪೃಶ್ಯತೆ ಹಾಗೂ ತಾರತಮ್ಯಗಳು ದೂರವಾಗಿ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿಸಲು ಇಂತಹ ಸಾಮೂಹಿಕ ಆಚರಣೆಗಳು ಅಗತ್ಯ. ಇದರೊಂದಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರೊರೆಸುವ ಕಾರ್ಯವೂ ನಡೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೂವರು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಶಿಕ್ಷಣಕ್ಕಾಗಿ ಧನಸಹಾಯ ನೀಡಲಾಯಿತು. ಮಾಜಿ ಸಚಿವ ಬಿ. ರಮಾನಾಥ ರೈ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಹಾಗೂ ರವೀಂದ್ರ ಕಂಬಳಿ ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಕರಾದ ಸುಮಿತ್ರಾ ಸುರೇಶ್ ಕುಂಪಣಮಜಲು, ನಳಿನಿ ವಿಠಲ ಆಳ್ವ ಹಾಗೂ ಕೇಶವ ದೋಟ–ಕುಸುಮಾವತಿ ದಂಪತಿ ಉಪಸ್ಥಿತರಿದ್ದರು. ಶಿಕ್ಷಕಿ ಕವಿತಾ ದೇವದಾಸ್ ಕಾರ್ಯಕ್ರಮ ನಿರೂಪಿಸಿದರು. ಪೊಳಲಿ ಸುಬ್ರಹ್ಮಣ್ಯ ತಂತ್ರಿ ಅವರ ನೇತೃತ್ವದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಪೂಜೆ ನೆರವೇರಿತು.

Leave a Reply

Your email address will not be published. Required fields are marked *