ಮೈಸೂರು: ಹೂಟಗಳ್ಳಿಯಲ್ಲಿ ಶ್ರೀ ಭುವನೇಶ್ವರಿ ಟೈಲರಿಂಗ್ ಮಾಲೀಕರ ಸಂಘದ ಉದ್ಘಾಟನಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಟೈಲರಿಂಗ್ ವೃತ್ತಿಯಲ್ಲಿ ತೊಡಗಿರುವ ಸ್ಥಳೀಯ ಮಾಲೀಕರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸಿ, ಅವರ ಹಿತಾಸಕ್ತಿ, ವೃತ್ತಿ ಅಭಿವೃದ್ಧಿ ಹಾಗೂ ಪರಸ್ಪರ ಸಹಕಾರಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಸಂಘವನ್ನು ಸ್ಥಾಪಿಸಲಾಗಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರು, ಟೈಲರಿಂಗ್ ವೃತ್ತಿಯಲ್ಲಿ ತೊಡಗಿರುವವರಿಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಅರ್ಹರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ಒದಗಿಸುವುದು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸಹಕರಿಸುವುದಾಗಿ ತಿಳಿಸಿದರು.

ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚಂದ್ರಿಕಾ ಸುರೇಶ್ ಅವರು ಮಾತನಾಡಿ, ಸಂಘದ ಸದಸ್ಯರಿಗೆ ಅಗತ್ಯವಿರುವ ಸಂದರ್ಭದಲ್ಲಿ ಬೆಂಬಲ ಹಾಗೂ ಸಹಕಾರ ನೀಡುವುದಾಗಿ ತಿಳಿಸಿದರು. ಸಂಘದ ಅಭಿವೃದ್ಧಿ ಮತ್ತು ಸದಸ್ಯರ ಹಿತಾಸಕ್ತಿಗಾಗಿ ಸದಾ ಬೆನ್ನೆಲುಬಾಗಿ ನಿಲ್ಲುವುದಾಗಿ ಹೇಳಿದರು.

ಪಿ.ಜಿ.ಆರ್.ಎಸ್.ಎಸ್. ಪಂಚಾಯತ್ ಗ್ರಾಮೀಣಾಭಿವೃದ್ಧಿ ರೈತರ ಸೇವಾ ಸಮಿತಿಯ ಅಧ್ಯಕ್ಷ ಯಾದವ್ ಹರೀಶ್ ಹಾಗೂ ಚಿರಂಜೀವ ಸೇವಾ ಟ್ರಸ್ಟ್, ಮೈಸೂರು ಅಧ್ಯಕ್ಷ ರಕ್ತದಾನಿ ಮಂಜು ಅವರು ಸಂಘದ ಮುಂದಿನ ಕಾರ್ಯಚಟುವಟಿಕೆಗಳಿಗೆ ಅಗತ್ಯ ಸಹಕಾರ ಮತ್ತು ಮಾರ್ಗದರ್ಶನ ನೀಡುವುದಾಗಿ ತಿಳಿಸಿದರು.

ಸಂಘದ ಅಧ್ಯಕ್ಷೆ ಮಣಿ ಮಾತನಾಡಿ, ಮುಂದಿನ ದಿನಗಳಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಟೈಲರಿಂಗ್ ವೃತ್ತಿಯಲ್ಲಿ ತೊಡಗಿರುವವರನ್ನು ಸಂಘದೊಂದಿಗೆ ಸಂಪರ್ಕಿಸುವ ಪ್ರಯತ್ನ ನಡೆಸಲಾಗುವುದು ಎಂದರು. ಟೈಲರಿಂಗ್ ಕ್ಷೇತ್ರದಲ್ಲಿರುವವರಿಗೆ ಅಗತ್ಯ ಮಾರ್ಗದರ್ಶನ, ಸಹಕಾರ ಹಾಗೂ ಸಾಧ್ಯವಾದಷ್ಟು ನೆರವು ಒದಗಿಸುವುದು ಸಂಘದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಕೆಎಚ್‌ಬಿ, ಎನ್‌ಎಚ್‌ಬಿ ಬಡಾವಣೆ, ಜಿಟಿ ಲೇಔಟ್, ಬೆಳವಾಡಿ, ಕೂರ್ಗಳ್ಳಿ ಮತ್ತು ಹೂಟಗಳ್ಳಿ ಭಾಗದ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಟೈಲರಿಂಗ್ ಕಲಿಯಲು ಆಸಕ್ತಿ ಹೊಂದಿರುವವರು, ಹೊಲಿಗೆ ಯಂತ್ರದ ಅಗತ್ಯವಿರುವವರು ಅಥವಾ ಟೈಲರಿಂಗ್ ವೃತ್ತಿಗೆ ಸಂಬಂಧಿಸಿದ ಸಮಸ್ಯೆ ಹಾಗೂ ಮಾರ್ಗದರ್ಶನದ ಅಗತ್ಯವಿರುವವರು ಸಂಘವನ್ನು ಸಂಪರ್ಕಿಸಬಹುದು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.






