ಕುತ್ಲೂರು–ನಾವೂರು: ಶತಮಾನಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲಲ್ಲೇ ಜೀವನ ನಡೆಸುತ್ತಿದ್ದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ನಿವಾಸಿಗಳಿಗೆ ಇದೀಗ ಭರವಸೆಯ ಬೆಳಕು ಮೂಡಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರ ನಿರಂತರ ಪ್ರಯತ್ನದ ಫಲವಾಗಿ ಕುತ್ಲೂರು ಹಾಗೂ ನಾವೂರು ಭಾಗದ ವಿದ್ಯುತ್ ವಂಚಿತ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ರಕ್ರಿಯೆ ಮಹತ್ವದ ಹಂತ ತಲುಪಿದೆ.

ಕರ್ನಾಟಕ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ 91ನೇ ಸಭೆಯಲ್ಲಿ ಕೆಲವು ಷರತ್ತುಗಳಿಗೆ ಒಳಪಟ್ಟು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರು ಮತ್ತು ನಾವೂರು ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅನುಮೋದನೆ ನೀಡಲಾಗಿದೆ.

ಇದರಂತೆ ನಾವೂರು ಭಾಗದ 26 ಕುಟುಂಬಗಳು ಹಾಗೂ ಕುತ್ಲೂರು ಭಾಗದ ಸುಮಾರು 32 ಕುಟುಂಬಗಳು ವಿದ್ಯುತ್ ಸಂಪರ್ಕ ಪಡೆಯುವ ನಿರೀಕ್ಷೆಯಲ್ಲಿವೆ. ಬೆಳ್ತಂಗಡಿ ತಾಲೂಕಿನ ಈ ಪ್ರದೇಶಗಳಲ್ಲಿ 11 ಕೆ.ವಿ. ವಿದ್ಯುತ್ ವಿತರಣಾ ಮಾರ್ಗವನ್ನು ಭೂಗತ ಕೇಬಲ್ ಮೂಲಕ ಅಳವಡಿಸಲು ಅನುಮತಿ ದೊರೆತಿದೆ.

ಈ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕ ಕಾಮಗಾರಿಗೆ ಅಗತ್ಯ ಅನುದಾನ ಮೀಸಲಿಡುವಂತೆ ಒತ್ತಾಯಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಸೆ.2ರಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.

ರಕ್ಷಿತ್ ಶಿವರಾಂ ನೇತೃತ್ವದ ನಿಯೋಗವು ಇಂಧನ ಸಚಿವರನ್ನು ಭೇಟಿಯಾಗಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಜನವಸತಿ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಗತ್ಯ ಅನುದಾನ ಒದಗಿಸುವಂತೆ ಮನವಿ ಮಾಡಿತು.

ಈ ವೇಳೆ ಮಾತನಾಡಿದ ಸಚಿವ ಕೆ.ಜೆ. ಜಾರ್ಜ್, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಜನರಿಗೆ ವಿದ್ಯುತ್ ಸೌಲಭ್ಯ ಒದಗಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ವಿದ್ಯುತ್ ಸಂಪರ್ಕ ಕಲ್ಪಿಸಲು ಅಗತ್ಯವಿರುವ ಅನುದಾನವನ್ನು ಮೀಸಲಿಡಲಾಗುವುದು ಎಂದು ಭರವಸೆ ನೀಡಿದರು.

ಬಳಿಕ ಅರಣ್ಯ ಭವನಕ್ಕೆ ಭೇಟಿ ನೀಡಿದ ನಿಯೋಗವು ಹಿರಿಯ ಅರಣ್ಯ ಹಾಗೂ ವನ್ಯಜೀವಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿತು. ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಗೆ ಯಾವುದೇ ಧಕ್ಕೆಯಾಗದಂತೆ ನಿಯಮಾನುಸಾರ ವಿದ್ಯುತ್ ಸಂಪರ್ಕ ಕಾಮಗಾರಿ ಕೈಗೊಳ್ಳುವ ಕುರಿತು ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ, ಸಂಚಾಲಕ ಶೇಖರ್ ಲಾಯಿಲ, ಮುಖಂಡರಾದ ಸುಧಾಕರ ಕುತ್ಲೂರು, ಪ್ರಶಾಂತ್ ಕುತ್ಲೂರು, ಸಂತೋಷ್ ಕಲ್ಲಂಡ ನಾವರ, ವಸಂತ ಹಿತ್ತಿಲಪೇಲ, ನಾಗೇಶ್ ಸವಣಾಲು, ಶೇಖರ ಕಂಬುಜೆ ನಡ, ಲೋಕೇಶ್ ಕುದ್ಕೊಲಿ ನಡ, ವಸಂತ ಕಂಬುಜೆ ನಡ, ನವೀನ್ ಪುಲಿತ್ತಡಿ ನಾವೂರು ಹಾಗೂ ನಿರಂಜನ್ ಆಯಿಲ ಉಪಸ್ಥಿತರಿದ್ದರು.





