ಬಿ.ಸಿ.ರೋಡ್: ಹಿಂದೂ ಧಾರ್ಮಿಕ ಸೇವಾ ಸಮಿತಿ, ಬಿ.ಸಿ.ರೋಡ್ ಇದರ ಆಶ್ರಯದಲ್ಲಿ ಶ್ರೀ ರಕ್ತೇಶ್ವರಿ ಕ್ರಿಕೆಟರ್ಸ್, ಬಿ.ಸಿ.ರೋಡ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ‘ಮೊಸರು ಕುಡಿಕೆ ಉತ್ಸವ’ ಸೆಪ್ಟೆಂಬರ್ 5ರಂದು ಶನಿವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಉತ್ಸವದ ಅಂಗವಾಗಿ ಆಗಸ್ಟ್ 30ರಂದು ವಿವಿಧ ಪೂರ್ವಭಾವಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. 12 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಸಂಗೀತ ಸ್ಪರ್ಧೆ ನಡೆಯಲಿದ್ದು, ಭಕ್ತಿ ಗೀತೆ ಹಾಗೂ ಜಾನಪದ ಗೀತೆಗಳಿಗೆ ಅವಕಾಶವಿದೆ. ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ. 3 ರಿಂದ 7ನೇ ತರಗತಿ ಮತ್ತು 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಶ್ರೀಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆಯನ್ನೂ ಹಮ್ಮಿಕೊಳ್ಳಲಾಗಿದೆ.

ಸೆಪ್ಟೆಂಬರ್ 5ರಂದು ಬೆಳಗ್ಗೆ 10 ಗಂಟೆಯಿಂದ ಪುರುಷರು, ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ವಿವಿಧ ಮನರಂಜನಾ ಸ್ಪರ್ಧೆಗಳು ನಡೆಯಲಿವೆ. ಮಡಿಕೆ ಒಡೆಯುವುದು, ಸಂಗೀತ ಕುರ್ಚಿ, ನಿಂಬೆ-ಚಮಚ ಓಟ, ಹಗ್ಗಜಗ್ಗಾಟ, ರಿಂಗ್ ಸ್ಪರ್ಧೆ ಸೇರಿದಂತೆ ಹಲವು ಸ್ಪರ್ಧೆಗಳು ನಡೆಯಲಿವೆ.

ಮಧ್ಯಾಹ್ನದ ಬಳಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಸಂಜೆ ಸಭಾ ಕಾರ್ಯಕ್ರಮ, ಸಂಗೀತ ಕಾರ್ಯಕ್ರಮ ಹಾಗೂ ವಿಶೇಷ ಸಾಂಸ್ಕೃತಿಕ ಪ್ರದರ್ಶನಗಳು ನಡೆಯಲಿವೆ. ರಾತ್ರಿ ಶ್ರೀ ದೇವಿ ರಕ್ತೇಶ್ವರಿ ದೇವರಿಗೆ ವಿಶೇಷ ಪೂಜಾ ಕಾರ್ಯಕ್ರಮವೂ ನಡೆಯಲಿದೆ.

ರಾತ್ರಿ ಗಂಟೆ 7ರಿಂದ ಪ್ರಶಸ್ತಿ ವಿಜೇತ ಕಲಾಶ್ರೀ ಕುಸಲ್ದ ಕಲಾವಿದೆರ್ ಬೆದ್ರ ಇವರಿಂದ ” ನಾಲಯಿ ಮಗುರುಜಿ” ತುಳು ಹಾಸ್ಯಮಯ ನಾಟಕ ನಡೆಯಲಿದೆ. ಉತ್ಸವದ ಅಂಗವಾಗಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.








