ಮೂಡುಬಿದಿರೆ: ಲಕ್ಷಾಂತರ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉತ್ತರ ಉಪವಿಭಾಗದ ಅಪರಾಧ ಪತ್ತೆ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಬಂಧಿತನನ್ನು ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಬೈತಡ್ಕ ನಿವಾಸಿ ಶ್ರೀನಿವಾಸ ಬಿ.ಆರ್. (48) ಎಂದು ಗುರುತಿಸಲಾಗಿದೆ.

2009ರಲ್ಲಿ ವಾಹನ ಖರೀದಿಗಾಗಿ ಶ್ರೀರಾಮ್ ಫೈನಾನ್ಸ್ ಸಂಸ್ಥೆಯಿಂದ ₹10 ಲಕ್ಷ ಸಾಲ ಪಡೆದುಕೊಂಡಿದ್ದ ಶ್ರೀನಿವಾಸ, ಟೆಲ್ಕಾನ್ ಎಕ್ಸ್70 ವಾಹನ ಖರೀದಿಸಿದ್ದರು. ಬಳಿಕ ಸಾಲದ ಕಂತುಗಳನ್ನು ಪಾವತಿಸದೆ, ವಾಹನವನ್ನು ಪರಿಶೀಲನೆಗೆ ಹಾಜರುಪಡಿಸದೆ ಸಂಸ್ಥೆಗೆ ವಂಚನೆ ಮಾಡಿದ ಆರೋಪದಡಿ 2012ರಲ್ಲಿ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಸೆ.2ರಂದು ಜಾಲ್ಸೂರು ಗ್ರಾಮದ ಬೈತಡ್ಕ ಜಂಕ್ಷನ್‌ನಲ್ಲಿ ಶ್ರೀನಿವಾಸನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ನಂತರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈತನ ವಿರುದ್ಧ ಚೆಕ್‌ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ವಾರಂಟ್ ಕೂಡ ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.







