ಉಡುಪಿ: ಪಡಿತರ ಅಕ್ಕಿ ಚೀಲಗಳನ್ನು ಮನೆಯ ಅಂಗಳದಲ್ಲಿ ಇಟ್ಟಿರುವುದಾಗಿ ಆರೋಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕೋಟತಟ್ಟು ಗ್ರಾಮದ ನಾಗೇಂದ್ರ ಪುತ್ರನ್ (37), ಪಾರಂಪಳ್ಳಿ ಗ್ರಾಮದ ಪಡುಕೆರೆಯ ನಿವಾಸಿ ಪಿ. ಸುಮಂತ್ ಕುಂದರ್ (40) ಹಾಗೂ ಮೂಡುಹಡು ಗ್ರಾಮದ ಸಚಿನ್ ಶ್ರೀಯಾನ್ (32) ಎಂದು ಗುರುತಿಸಲಾಗಿದೆ.

ಪ್ರಕರಣದ ಇಬ್ಬರು ಆರೋಪಿಗಳಾದ ನಾಗೇಂದ್ರ ಪುತ್ರನ್ ಮತ್ತು ಸುಮಂತ್ ಕುಂದರ್ ಅವರನ್ನು ಸೆ.2ರಂದು ಮೈಸೂರಿನ ಅರಮನೆ ಎದುರಿನ ವಸ್ತು ಪ್ರದರ್ಶನ ಮೈದಾನದ ಬಳಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮತ್ತೋರ್ವ ಆರೋಪಿ ಸಚಿನ್ ಶ್ರೀಯಾನ್‌ನನ್ನು ಸೆ.1ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಆ.31ರಂದು ಘಟನೆ ನಡೆದಿದ್ದು, ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರುದಾರರಿಗೆ ಬೆದರಿಕೆ ಒಡ್ಡಿ ಸುಲಿಗೆಗೆ ಯತ್ನಿಸಿದ ಆರೋಪವೂ ಆರೋಪಿಗಳ ಮೇಲಿದೆ. ಪ್ರಕರಣದ ತನಿಖೆ ಮುಂದುವರಿದಿದೆ.

ಆರೋಪಿಗಳ ಪತ್ತೆಗಾಗಿ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು. ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ ಕೋಟ ಠಾಣೆಯ ಪಿಎಸ್‌ಐ ಪ್ರವೀಣ್ ಕುಮಾರ್ ಆರ್. ಮತ್ತು ಪಿಎಸ್‌ಐ (ಕಾ.ಸು.) ಹಾಗೂ ತನಿಖಾಧಿಕಾರಿ ಮಹಾಂತೇಶ ಜಾಬಗೌಡ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಪೊಲೀಸ್ ಸಿಬ್ಬಂದಿ ವಿಜಯೇಂದ್ರ, ಶರತ್ ಹಾಗೂ ಶಿವರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.






