ದಕ್ಷಿಣ ಕನ್ನಡದ ನಾನಾ ಕಡೆಗಳಿಂದ ಕೆಂಪು ಕಲ್ಲಿನ ಮಣ್ಣು ತುಂಬಿಕೊಂಡು ಸಿಮೆಂಟ್ ಉತ್ಪಾದನೆಗಾಗಿ ನೆರೆಯ ಆಂಧ್ರ ಪ್ರದೇಶಕ್ಕೆ ತೆರಳುತ್ತಿರುವ ಭಾರೀ ಗಾತ್ರದ ಲಾರಿಗಳು ಜಿಲ್ಲೆಯ ಕಂಡ ಕಂಡ ರಸ್ತೆಗಳ ಎಲ್ಲೆಂದರಲ್ಲಿ ಹಾಗೂ ರಾತ್ರಿಯ ಸಮಯದಲ್ಲಿ ಅತೀ ವೇಗವಾಗಿ ಸಂಚಾರಿಸುವುದರಿಂದ ದ್ವಿ ಚಕ್ರ ವಾಹನ ಸವಾರರು, ಅಟೋ ರಿಕ್ಷಾ ಚಾಲಕರು ಸೇರಿದಂತೆ ಸಣ್ಣ ವಾಹನ ಸವಾರರಿಗೆ ವಾಹನ ಚಲಾಯಿಸಲು ದೊಡ್ಡ ಸವಾಲೇ ಎದುರಾಗಿದೆ. ಇದರಿಂದ ದಿನಂಪ್ರತಿ ಅಲ್ಲಲ್ಲಿ ಅಪಘಾತಗಳು ಸಂಭವಿಸಿ ಅನೇಕರಿಗೆ ಸಂಕಷ್ಟ ಎದುರಾಗಿದೆ.

ಅತೀ ಭಾರ ಹೊತ್ತುಕೊಂಡು ಸಾಗುತ್ತಿರುವ 12-16 ಟಯರ್ ಗಳ ಲಾರಿಗಳ ಸಾಗಾಟದಿಂದಾಗಿ ರಸ್ತೆಗಳು ಸಂಪೂರ್ಣವಾಗಿ ಜಖಂಗೊಂಡಿದ್ದು, ರಸ್ತೆಯುದ್ದಕ್ಕೂ ಹೊಂಡ ಗುಂಡಿಗಳಿಂದ ಕೂಡಿದ್ದು ಸುಗಮ ಸಂಚಾರಕ್ಕೆ ತೊಡಾಕಾಗಿದೆ. ಸ್ಥಳೀಯರು ಈ ಬಗ್ಗೆ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿ ಪೋಲಿಸ್ ಇಲಾಖೆಗೆ ದೂರು ನೀಡಿದರೂ ಸಹ ಭಾರೀ ಗಾತ್ರದ ದಾರಿಗಳ ಸಂಚಾರ ಮಾತ್ರ ಎಡಬಿಡದೇ ಸಾಗುತ್ತಲೇ ಇದೆ.

ಈ ಬಗ್ಗೆ ಜಿಲ್ಲಾಧಿಕಾರಿಗಳು ಗಣಿ ಇಲಾಖೆಗೆ ಸೂಕ್ತ ನಿರ್ದೇಶನ ನೀಡಿ, ಕೆಂಪು ಮಣ್ಣು ಹಾಗೂ ಜಲ್ಲಿ ತುಂಬಿಕೊಂಡು ಹೋಗುತ್ತಿರುವ ಭಾರೀ ಗಾತ್ರದ ಲಾರಿಗಳಿಗೆ ನಿರ್ದಿಷ್ಟ ರಸ್ತೆಯಲ್ಲಿ ಹೋಗುವಂತೆ ಪರವಾನಿಗೆಯೊಂದಿಗೆ ರೂಟ್ ಮ್ಯಾಪ್ ನ್ನು ಅಳವಡಿಸಲು ತಿಳಿಸುವುದರೊಂದಿಗೆ ಪೊಲೀಸ್ ಇಲಾಖೆಗೆ ಅಗತ್ಯ ಕ್ರಮ ಜರುಗಿಸಲು ಜಿಲ್ಲಾಡಳಿತದ ಪರವಾಗಿ ಸೂಚನೆ ನೀಡುವಂತೆ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ, ಪ್ರಭಾಕರ ಪ್ರಭು ಪೊಲೀಸ್ ಇಲಾಖೆಗೆ ಈ ಮೂಲಕ ಒತ್ತಾಯಪಡಿಸಲಾಗಿದೆ.




