ಬಂಟ್ವಾಳ: ಅಕ್ರಮ ಸಕ್ರಮ ಯೋಜನೆಯಡಿ ಸರಕಾರಿ ಜಮೀನು ಮಂಜೂರಾಗಿ ಹಕ್ಕುಪತ್ರ ಪಡೆದಿರುವ ರೈತರಿಗೆ ಅರ್ಜಿ ಕಿಯೋಸ್ಕ್ ಮೂಲಕ ನೇರವಾಗಿ ಭೂಮಿ ಶಾಖೆಯಲ್ಲಿ ಪಹಣಿ ದಾಖಲಾತಿ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಮಾಜಿ ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯರಾದ ಪ್ರಭಾಕರ ಪ್ರಭು ಅವರು ಕಂದಾಯ ಸಚಿವರಿಗೆ ಮನವಿ ಮಾಡಿದ್ದಾರೆ.

ಸರಕಾರಿ ಜಮೀನಿನಲ್ಲಿ ಕೃಷಿ ಮಾಡಿಕೊಂಡಿರುವ ರೈತರಿಗೆ ಅಕ್ರಮ ಸಕ್ರಮ ಸಮಿತಿಯ ಮೂಲಕ ಹಕ್ಕುಪತ್ರ ಮಂಜೂರಾಗಿದ್ದು, ಈ ಹಕ್ಕುಪತ್ರಗಳ ಆಧಾರದ ಮೇಲೆ ಪಹಣಿ ದಾಖಲಾತಿ ಮಾಡಿಕೊಂಡು ರೈತರು ಬೆಳೆ ಸಾಲ, ಕೃಷಿ ಸಾಲ, ಬೆಳೆ ವಿಮೆ ಸೇರಿದಂತೆ ವಿವಿಧ ಸರಕಾರಿ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಆದರೆ ಇತ್ತೀಚೆಗೆ ಪಹಣಿ ದಾಖಲಾತಿ ಪ್ರಕ್ರಿಯೆಗೆ ನಿರ್ಬಂಧ ವಿಧಿಸಿರುವುದರಿಂದ ಹಕ್ಕುಪತ್ರ ಹೊಂದಿದ್ದರೂ ಹಲವು ರೈತರು ಸೌಲಭ್ಯಗಳಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಭೂ ಮಂಜೂರಾತಿಗೊಂಡ ಹಕ್ಕುಪತ್ರಗಳಿಗೆ ಪಹಣಿ ದಾಖಲಾತಿ ಮಾಡಲು ಸಂಬಂಧಪಟ್ಟ ಸರ್ವೇ ನಂಬರಿನಲ್ಲಿರುವ ಎಲ್ಲಾ ಜಮೀನುಗಳನ್ನು 1-5 ಅಡಿಯಲ್ಲಿ ಪೋಡಿ (ಫ್ಲೋಟಿಂಗ್) ಮಾಡಿದ ಬಳಿಕವಷ್ಟೇ ಪಹಣಿಗೆ ದಾಖಲಿಸಲು ಅವಕಾಶ ನೀಡಲಾಗುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ 3ರಿಂದ 5 ವರ್ಷಗಳ ಕಾಲಾವಕಾಶ ಬೇಕಾಗುವ ಸಾಧ್ಯತೆ ಇದೆ. ಇದರಿಂದ ಈಗಾಗಲೇ ಹಕ್ಕುಪತ್ರ ಪಡೆದಿರುವ ರೈತರು ಪಹಣಿ ಇಲ್ಲದೆ ಬೆಳೆ ಸಾಲ, ಕೃಷಿ ಅಭಿವೃದ್ಧಿ ಸಾಲ, ಬೆಳೆ ವಿಮೆ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಅಕ್ರಮ ಸಕ್ರಮ ಸಮಿತಿಯಲ್ಲಿ ಮಂಜೂರಾತಿ ಪಡೆದು ಹಕ್ಕುಪತ್ರ ಹೊಂದಿರುವ ರೈತರಿಗೆ ಒಂದು ಬಾರಿಗೆ ಮಾತ್ರ ವಿಶೇಷ ಅವಕಾಶ ಕಲ್ಪಿಸಬೇಕು. ಈ ಹಿಂದೆ ಇದ್ದ ಪದ್ಧತಿಯಂತೆ ಅರ್ಜಿ ಕಿಯೋಸ್ಕ್ ಮೂಲಕ ನೇರವಾಗಿ ಭೂಮಿ ಶಾಖೆಯಲ್ಲಿ, ತಹಸೀಲ್ದಾರ್ ಲಾಗಿನ್ ಮೂಲಕ ಪಹಣಿ ದಾಖಲಾತಿ ಮಾಡಲು ಸಾಫ್ಟ್ವೇರ್ನಲ್ಲಿ ಅವಕಾಶ ಕಲ್ಪಿಸಬೇಕು ಎಂದು ಪ್ರಭಾಕರ ಪ್ರಭು ಅವರು ಕಂದಾಯ ಸಚಿವರಲ್ಲಿ ಮನವಿ ಮಾಡಿದ್ದಾರೆ.
ರೈತರ ಹಿತದೃಷ್ಟಿಯಿಂದ ಈ ಬೇಡಿಕೆಯನ್ನು ಪರಿಗಣಿಸಿ ಶೀಘ್ರ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.



