ಬಂಟ್ವಾಳ: ತಾಲೂಕಿನ ತುಂಬೆಯ ಹನುಮನಗರದಲ್ಲಿ ಭಾಗ್ಯೋದಯ ಮಿತ್ರ ಕಲಾ ವೃಂದ (ರಿ.) ಇದರ ನವೀಕೃತ ಕಟ್ಟಡ ‘ಭಾಗ್ಯೋದಯ’ದ ಉದ್ಘಾಟನಾ ಸಮಾರಂಭ ಸೆ. 6ರಂದು ನಡೆಯಿತು.

ನವೀಕೃತ ಕಟ್ಟಡದ ‘ಭಾಗ್ಯೋದಯ’ ನಾಮಫಲಕವನ್ನು ಅನಾವರಣಗೊಳಿಸಿದ ಅರ್ಕುಳ ಮನಸ್ವಿನಿ ಆಸ್ಪತ್ರೆಯ ಖ್ಯಾತ ಮನೋವೈದ್ಯ ಡಾ. ರವೀಶ್ ತುಂಗ ಮಾತನಾಡಿ, ಯುವಶಕ್ತಿಯೇ ದೇಶದ ಭವಿಷ್ಯ. ಯುವಶಕ್ತಿಯ ಮೂಲಕ ವಿಕಸಿತ ಭಾರತದ ಯಶಸ್ಸು ಸಾಧ್ಯ. ಯುವ ಸಂಘಟನೆಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಸಾಧನೆಗೆ ಪರಿಶ್ರಮದೊಂದಿಗೆ ದೇವರ ಅನುಗ್ರಹವೂ ಅಗತ್ಯ. ಗ್ರಾಮದ ಅಭಿವೃದ್ಧಿಗೆ ಶಾಲೆ, ದೇವಸ್ಥಾನ ಹಾಗೂ ಆಸ್ಪತ್ರೆಗಳ ಅಗತ್ಯವಿದೆ. ಸಂಘಟನೆಯ ಸೇವಾ ಕಾರ್ಯಗಳಿಗೆ ತಮ್ಮ ಸಹಕಾರ ಸದಾ ಇರಲಿದೆ ಎಂದರು.

ಕಟ್ಟಡವನ್ನು ಉದ್ಘಾಟಿಸಿದ ಎಂ.ಪಿ. ಫ್ಯಾಮಿಲಿ ಶಾಪ್, ಮಂಗಳೂರು ಇದರ ಮಾಲಕ ದಿನೇಶ್ ಎಂ.ಪಿ. ಮಾತನಾಡಿ, ಯುವಜನರು ತಮ್ಮ ಮನಸ್ಥಿತಿಯ ಬಗ್ಗೆ ಚಿಂತಿಸಿ, ಉತ್ತಮ ಆಚಾರ–ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಭಗವಂತನ ಸೇವೆಯಲ್ಲಿ ತೊಡಗಬೇಕು. ತಂದೆ–ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ಅನಿವಾರ್ಯ. ಸಂಘದ ನೂತನ ಕಟ್ಟಡದಲ್ಲಿ ಸತ್ಕಾರ್ಯಗಳು ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಅತಿಥಿಯಾಗಿ ಭಾಗವಹಿಸಿದ್ದ ಸಂಸ್ಕಾರ ಭಾರತೀ ಜಿಲ್ಲಾಧ್ಯಕ್ಷ ಟಿ. ತಾರಾನಾಥ ಕೊಟ್ಟಾರಿ ಮಾತನಾಡಿ, ಸಂಘಟನೆಯೊಂದು ಸಮಾಜಮುಖಿಯಾಗಿ ತೊಡಗಿಸಿಕೊಂಡಾಗ ಗ್ರಾಮದ ಅಭಿವೃದ್ಧಿಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ತುಂಬೆಯ ಯುವ ಸಮುದಾಯ ತೊಡಗಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಭಾಗ್ಯೋದಯ ಮಿತ್ರ ಕಲಾ ವೃಂದದ ಅಧ್ಯಕ್ಷ ಯೋಗೀಶ್ ಕಜೆಕಂಡ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘ ನಡೆದು ಬಂದ ಹಾದಿ ಹಾಗೂ ಸಂಘದ ಬೆಳವಣಿಗೆಗೆ ಹಿರಿಯರು ನೀಡಿದ ತ್ಯಾಗ ಮತ್ತು ಕೊಡುಗೆಗಳ ಕುರಿತು ವಿವರಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಅಂಗನವಾಡಿ ಶಿಕ್ಷಕಿ ವಿಶಾಲಾಕ್ಷಿ ಹಾಗೂ ಸಂಘದ ಸ್ಥಾಪಕ ಸದಸ್ಯ ವೆಂಕಪ್ಪ ಕುಲಾಲ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿನಿಯರಾದ ದೀಪ್ತಿ ಪರನೀರು ಹಾಗೂ ತನ್ವಿ ಪರನೀರು ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನೂತನ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನೂ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯ ಲಿಂಗಪ್ಪ ಕುಲಾಲ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಪರ್ಲಕ್ಕೆ, ಕೋಶಾಧಿಕಾರಿ ಚರಣ್, ಜೊತೆ ಕಾರ್ಯದರ್ಶಿ ಧನ್ಯ ಗೋಪಾಲ್ ಹಾಗೂ ಕ್ರೀಡಾ ಕಾರ್ಯದರ್ಶಿ ಅನಿಶ್ ಪರ್ಲಕ್ಕೆ ಉಪಸ್ಥಿತರಿದ್ದರು.
ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಕೊಟ್ಟಾರಿ ಸ್ವಾಗತಿಸಿದರು. ಹರ್ಷ ಸನ್ಮಾನಪತ್ರ ವಾಚಿಸಿದರು. ವಿದ್ಯಾ ಸಚಿನ್ ವಂದಿಸಿದರು. ಶಿಕ್ಷಕ ಸಂತೋಷ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.


