Breaking
5 Sep 2026, Sat

ಪುತ್ತೂರು: ಬೆಟ್ಟಂಪಾಡಿ ದೇವಸ್ಥಾನದ ಕಾಣಿಕೆ ಡಬ್ಬಿ ಕಳವು: ಅಂತಾರಾಜ್ಯ ಕಳ್ಳನ ಬಂಧನ

ಪುತ್ತೂರು: ಬೆಟ್ಟಂಪಾಡಿ ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಜ್ಯ ಕಳ್ಳನನ್ನು ಪುತ್ತೂರು ಪೊಲೀಸರು ಬದಿಯಡ್ಕದಲ್ಲಿ ಬಂಧಿಸಿದ್ದಾರೆ. ಆರೋಪಿಯಿಂದ ಕಳವು ಮಾಡಿದ ಕಾಣಿಕೆ ಡಬ್ಬಿ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ.

ಕಾಸರಗೋಡು ನಿವಾಸಿ ಸತೀಶ (31) ಬಂಧಿತ ಆರೋಪಿ. ಆ.25ರಂದು ಬೆಳಗ್ಗೆ ದೇವಸ್ಥಾನದ ಹೊರಭಾಗದಲ್ಲಿದ್ದ ಕಾಣಿಕೆ ಡಬ್ಬಿ ಕಳವಾಗಿರುವುದು ಬೆಳಕಿಗೆ ಬಂದಿತ್ತು. ದೇವಸ್ಥಾನದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ವ್ಯಕ್ತಿಯೊಬ್ಬರು ಕಾಣಿಕೆ ಡಬ್ಬಿಯನ್ನು ಹೊತ್ತೊಯ್ದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ನಡೆಸಿದ್ದು, ಆರೋಪಿಯನ್ನು ಬದಿಯಡ್ಕದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಕಳವು ಮಾಡಿದ ಕಾಣಿಕೆ ಡಬ್ಬಿ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್‌ನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿ ವಿರುದ್ಧ ಈಗಾಗಲೇ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಅಡಿಕೆ ಕಳವು ಪ್ರಕರಣವೂ ದಾಖಲಾಗಿರುವುದು ತಿಳಿದುಬಂದಿದೆ.

ಪುತ್ತೂರು ಡಿವೈಎಸ್ಪಿ ಪ್ರಮೋದ್ ಕುಮಾರ್ ಅವರ ನಿರ್ದೇಶನದಂತೆ ಪುತ್ತೂರು ಗ್ರಾಮಾಂತರ ಪ್ರಭಾರ ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐಗಳಾದ ಗುಣಪಾಲ ಜೆ. ಹಾಗೂ ಸುಷ್ಮಾ ಜಿ. ಭಂಡಾರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಸಿಬ್ಬಂದಿಗಳಾದ ರಮೇಶ್, ನಾಗರಾಜ, ಮಂಜುನಾಥ, ಆಕಾಶ್, ಕಾರ್ತಿಕ್, ಅಪರಾಧ ವಿಭಾಗದ ಶರಣಪ್ಪ ಪಾಟೀಲ್, ಈರಣ್ಣ, ಹರಿಪ್ರಸಾದ್ ಹಾಗೂ ಜಿಲ್ಲಾ ಸಿಡಿಆರ್ ವಿಭಾಗದ ಸಂಪತ್ ಮತ್ತು ದಿವಾಕರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *