ತಿರುವನಂತಪುರಂ: ನಿಲ್ಲಿಸಿದ್ದ ಗೂಡ್ಸ್ ಲಾರಿಯ ಹಿಂಭಾಗಕ್ಕೆ ತಮಿಳುನಾಡು ನೋಂದಣಿಯ ಕಾರು ಡಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ನಡೆದಿದೆ.

ಮೃತರನ್ನು ತಮಿಳುನಾಡಿನ ಸೇಲಂ ಮೂಲದ ವಿಶ್ವ (20), ದಿಂಡಿಗಲ್ ಮೂಲದ ಸೂರ್ಯ (20), ಯುವಸಂಜಿತ್ (20), ಮಧುರೈ ಮೂಲದ ಸಂತೋಷ್ (20) ಹಾಗೂ ಪ್ರಸನ್ನ ಎಂದು ಗುರುತಿಸಲಾಗಿದೆ. ಉಳಿದ ಮೂವರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಮೃತರೆಲ್ಲರೂ ದಿಂಡಿಗಲ್‌ನ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಎನ್ನಲಾಗಿದೆ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕೈಪಮಂಗಲಂ ಸಮೀಪದ ಪನಂಬಿಕ್ಕುನ್ನು ಸೆಂಟರ್‌ನ ರಸ್ತೆ ತಿರುವಿನಲ್ಲಿ ಗೂಡ್ಸ್ ಲಾರಿಯನ್ನು ನಿಲ್ಲಿಸಲಾಗಿತ್ತು. ರಾತ್ರಿ ಸುಮಾರು 11.40ರ ವೇಳೆಗೆ ಬಂದ ಕಾರು ನಿಯಂತ್ರಣ ತಪ್ಪಿ ಲಾರಿಯ ಹಿಂಭಾಗಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ರಕ್ಷಣಾ ಸಿಬ್ಬಂದಿ ಕಾರಿನ ಬಿಡಿಭಾಗಗಳನ್ನು ಕತ್ತರಿಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಕಾರಿನಲ್ಲಿದ್ದ ಎಂಟೂ ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.



