ಉಪ್ಪಿನಂಗಡಿ: ಹೆದ್ದಾರಿ ಬದಿ ನಿಲ್ಲಿಸಿದ್ದ ಟ್ಯಾಂಕರ್‌ಗಳು ಸೇರಿದಂತೆ ಇತರ ವಾಹನಗಳ ಡೀಸೆಲ್ ಟ್ಯಾಂಕ್‌ನಿಂದ ಡೀಸೆಲ್ ಕಳವು ಮಾಡುತ್ತಿದ್ದ ಇಬ್ಬರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ನಿವಾಸಿಗಳಾದ ಜೈಮುತ್ತಾ (23) ಮತ್ತು ಮುತ್ತು (28) ಬಂಧಿತ ಆರೋಪಿಗಳು.

ಸೆಪ್ಟೆಂಬರ್ 3ರಂದು ರಾತ್ರಿ ಉಪ್ಪಿನಂಗಡಿ ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಕೌಕ್ರಾಡಿ ಗ್ರಾಮದ ಅಲಂಪಾಡಿ ಕ್ರಾಸ್ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಬೊಲೆರೋ ಪಿಕಪ್ ವಾಹನ ಕಣ್ಣಿಗೆ ಬಿದ್ದಿದೆ. ಮಂಗಳೂರು–ಬೆಂಗಳೂರು ಹೆದ್ದಾರಿ ಬದಿ ನಿಲ್ಲಿಸಿದ್ದ ಟ್ಯಾಂಕರ್‌ವೊಂದರ ಸಮೀಪ ಮೂವರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ.

ಪೊಲೀಸರನ್ನು ಕಂಡ ತಕ್ಷಣ ಮೂವರು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಇಬ್ಬರನ್ನು ಬೆನ್ನಟ್ಟಿ ಹಿಡಿದು ವಿಚಾರಣೆ ನಡೆಸಿದಾಗ, ಹೆದ್ದಾರಿ ಬದಿ ನಿಲ್ಲಿಸಿದ್ದ ವಾಹನಗಳ ಡೀಸೆಲ್ ಟ್ಯಾಂಕ್‌ಗಳಿಂದ ಡೀಸೆಲ್ ಕಳವು ಮಾಡುತ್ತಿದ್ದುದಾಗಿ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ ಸುಮಾರು 20 ಲೀಟರ್ ಡೀಸೆಲ್, ಖಾಲಿ ಕ್ಯಾನ್‌ಗಳು, ರಬ್ಬರ್ ಪೈಪ್ ಸೇರಿದಂತೆ ಕಳವು ಕೃತ್ಯಕ್ಕೆ ಬಳಸುತ್ತಿದ್ದ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಕೃತ್ಯಕ್ಕೆ ಬಳಸಿದ್ದ ಬೊಲೆರೋ ಪಿಕಪ್ ವಾಹನವನ್ನು ಕೂಡ ಪೊಲೀಸರು ಜಪ್ತಿ ಮಾಡಿದ್ದಾರೆ.
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಬಿ.ಎನ್.ಎಸ್.ಎಸ್. 2023ರ ಕಲಂ 35(1)(ಡಿ) ಹಾಗೂ ಬಿ.ಎನ್.ಎಸ್. 2023ರ ಕಲಂ 303(2)ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.



