Breaking
4 Sep 2026, Fri

ಸೆ. 5ರಂದು ಯಶವಂತಪುರ–ಮಂಗಳೂರು ನಡುವೆ 16 ಬೋಗಿಗಳ ವಂದೇ ಭಾರತ್ ಪ್ರಾಯೋಗಿಕ ಸಂಚಾರ

ಮಂಗಳೂರು: ರೈಲ್ವೇ ಮಂಡಳಿಯ ಸೂಚನೆ ಮೇರೆಗೆ 16 ಬೋಗಿಗಳ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರವನ್ನು ಸೆಪ್ಟೆಂಬರ್ 5ರಂದು ಹಮ್ಮಿಕೊಳ್ಳಲಾಗಿದೆ. ರೈಲಿನ ವೇಳಾಪಟ್ಟಿ ಹಾಗೂ ಸಂಚಾರ ಸಮಯವನ್ನು ಪರಿಶೀಲಿಸುವ ಉದ್ದೇಶದಿಂದ ಈ ಪರೀಕ್ಷಾರ್ಥ ಸಂಚಾರ ನಡೆಯಲಿದೆ.

ಯಶವಂತಪುರದಿಂದ ಬೆಳಗ್ಗೆ 6.05ಕ್ಕೆ ಹೊರಡುವ ರೈಲು ಹಾಸನ, ಸುಬ್ರಹ್ಮಣ್ಯ ರೋಡ್ ಹಾಗೂ ಪಡೀಲು ಮಾರ್ಗವಾಗಿ ಸಂಚರಿಸಿ ಮಧ್ಯಾಹ್ನ 2.25ಕ್ಕೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ತಲುಪಲಿದೆ. ಬಳಿಕ ಮಧ್ಯಾಹ್ನ 3 ಗಂಟೆಗೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ರಾತ್ರಿ 11 ಗಂಟೆಗೆ ಯಶವಂತಪುರ ತಲುಪಲಿದೆ.

ಈ ಹಿಂದೆ ಆಗಸ್ಟ್ 12ರಂದು ಸಕಲೇಶಪುರ–ಸುಬ್ರಹ್ಮಣ್ಯ ರೋಡ್ ನಡುವಿನ ಘಾಟಿ ಪ್ರದೇಶದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಪರೀಕ್ಷಾರ್ಥ ಸಂಚಾರ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಮುಖ್ಯವಾಗಿ ರೈಲಿನ ತಾಂತ್ರಿಕ ಅಂಶಗಳು ಹಾಗೂ ಸಂಚಾರದ ಸಾಧ್ಯತೆಗಳನ್ನು ಪರಿಶೀಲಿಸಲಾಗಿತ್ತು.

ಇದೀಗ ಸೆ. 5ರಂದು ನಡೆಯಲಿರುವ ಪ್ರಾಯೋಗಿಕ ಸಂಚಾರದಲ್ಲಿ ವೇಳಾಪಟ್ಟಿಯ ನಿಖರತೆ ಹಾಗೂ ನಿಗದಿತ ಸಮಯದೊಳಗೆ ಸಂಚಾರ ಪೂರ್ಣಗೊಳಿಸುವ ಸಾಮರ್ಥ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನಿಗದಿತ ವೇಳಾಪಟ್ಟಿಯಂತೆ ಯಶವಂತಪುರ–ಮಂಗಳೂರು ನಡುವಿನ ಪ್ರಯಾಣಕ್ಕೆ ಒಟ್ಟು 8 ಗಂಟೆ 20 ನಿಮಿಷ ಬೇಕಾಗಲಿದ್ದು, ಈ ಅವಧಿಯೊಳಗೆ ಸಂಚಾರ ಪೂರ್ಣಗೊಳಿಸುವಂತೆ ರೈಲ್ವೇ ಚೀಫ್ ಕಂಟ್ರೋಲರ್ ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *