ಬೆಂಗಳೂರು: ಚಿಕ್ಕಬಳ್ಳಾಪುರದಿಂದ ಬೆಂಗಳೂರಿನ ಕೆಎಂಎಫ್ಗೆ ಹಾಲು ಸಾಗಿಸುತ್ತಿದ್ದ ಟ್ಯಾಂಕರ್ವೊಂದು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ಹೆಬ್ಬಾಳದ ಪಶುವೈದ್ಯ ಕಾಲೇಜು ಮುಂಭಾಗ ಬುಧವಾರ ಮಧ್ಯಾಹ್ನ ನಡೆದಿದೆ.
ಅಪಘಾತದ ಪರಿಣಾಮ ಟ್ಯಾಂಕರ್ನ ಮುಚ್ಚಳ ತೆರೆದುಕೊಂಡಿದ್ದು, ಅದರಲ್ಲಿದ್ದ ಸುಮಾರು 14 ಸಾವಿರ ಲೀಟರ್ ಹಾಲು ರಸ್ತೆಯಲ್ಲಿ ಹರಿದುಹೋಗಿದೆ. ಘಟನೆಯಲ್ಲಿ ಟ್ಯಾಂಕರ್ ಚಾಲಕ ರಾಜು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಮಧ್ಯಾಹ್ನ ಸುಮಾರು 3 ಗಂಟೆಗೆ ಹೆಬ್ಬಾಳದ ಸರ್ವೀಸ್ ರಸ್ತೆಯಲ್ಲಿ ಘಟನೆ ನಡೆದಿದೆ. ಚಿಕ್ಕಬಳ್ಳಾಪುರದಿಂದ 14 ಸಾವಿರ ಲೀಟರ್ ಹಾಲು ತುಂಬಿಕೊಂಡು ಬೆಂಗಳೂರಿನ ಕೆಎಂಎಫ್ಗೆ ಬರುತ್ತಿದ್ದ ವೇಳೆ ಚಾಲಕನಿಗೆ ವೇಗ ನಿಯಂತ್ರಿಸಲು ಸಾಧ್ಯವಾಗದೆ ರಸ್ತೆ ವಿಭಜಕಕ್ಕೆ ಟ್ಯಾಂಕರ್ ಡಿಕ್ಕಿಯಾಗಿದೆ. ಬಳಿಕ ಟ್ಯಾಂಕರ್ ಏಕಾಏಕಿ ಪಲ್ಟಿಯಾಗಿದ್ದು, ಸಾವಿರಾರು ಲೀಟರ್ ಹಾಲು ರಸ್ತೆಯಲ್ಲಿ ಹರಿದಿದೆ.

ಹಾಲು ಸೋರಿಕೆಯನ್ನು ತಡೆಯಲು ಕೆಲವರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಇದೇ ವೇಳೆ ಕೆಲವರು ಬಾಟಲಿಗಳಲ್ಲಿ ಹಾಲು ಸಂಗ್ರಹಿಸುತ್ತಿರುವುದು ಕಂಡುಬಂದಿದೆ.

ಅಪಘಾತದಿಂದ ಹೆಬ್ಬಾಳದ ಸರ್ವೀಸ್ ರಸ್ತೆಯಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಸಂಚಾರ ದಟ್ಟಣೆ ಉಂಟಾಯಿತು. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸಂಚಾರ ಪೊಲೀಸರು ಕ್ರೇನ್ ಸಹಾಯದಿಂದ ಪಲ್ಟಿಯಾಗಿದ್ದ ಟ್ಯಾಂಕರ್ನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ಹೆಬ್ಬಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



