ಬೆಳ್ತಂಗಡಿ: ಲಾಯಿಲ ಗ್ರಾಮದ ಪಡ್ಲಾಡಿ ನೇತಾಜಿ ಬಡಾವಣೆ ಬಳಿಯ ಸರ್ಕಾರಿ ಜಾಗ ಸರ್ವೇ ನಂ. 116/1ರಲ್ಲಿ 0.05 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಅನಧಿಕೃತ ಕಟ್ಟಡ ತೆರವಿಗೆ ಬೆಳ್ತಂಗಡಿ ತಹಶೀಲ್ದಾರ್ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಟ್ಟಡಕ್ಕೆ ನೋಟೀಸ್ ಅಂಟಿಸಿದ್ದಾರೆ.

ಲಾಯಿಲ ಗ್ರಾಮ ಪಂಚಾಯಿತಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಪಂಪ್ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸೂರಪ್ಪ ಎಂಬವರು ಯಾವುದೇ ಅನುಮತಿ ಪಡೆಯದೆ ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿತ್ತು. ಈ ಬಗ್ಗೆ ಸ್ಥಳೀಯರು ಕಂದಾಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು.

ಇದೇ ಜಾಗವನ್ನು ಸಾರ್ವಜನಿಕ ಗ್ರಂಥಾಲಯ ನಿರ್ಮಾಣಕ್ಕಾಗಿ ಮೀಸಲಿಡುವಂತೆ 2023ರ ಡಿ.21ರಂದು ಲಾಯಿಲ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿತ್ತು ಎನ್ನಲಾಗಿದೆ. ಗ್ರಂಥಾಲಯ ನಿರ್ಮಿಸುವ ಉದ್ದೇಶ ಹೊಂದಿರುವ ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ದೂರಿನ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಎಸ್.ಎನ್. ನರಗುಂದ, ಕಂದಾಯ ನಿರೀಕ್ಷಕ ರಾಜು ಲಮಾಣಿ ಹಾಗೂ ಗ್ರಾಮ ಆಡಳಿತಾಧಿಕಾರಿ ರನಿತಾ ಅವರು ಆ.24ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ರಾಜು ಮೇಸ್ತ್ರಿ, ಅವರ ಪುತ್ರರು ಸೇರಿದಂತೆ ಕೆಲವರು ಸ್ಥಳಕ್ಕೆ ಆಗಮಿಸಿ ಕಟ್ಟಡವನ್ನು ತಾವೇ ನಿರ್ಮಿಸುತ್ತಿರುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ನಂತರ ಸೆ.3ರಂದು ಕಟ್ಟಡ ತೆರವುಗೊಳಿಸುವಂತೆ ತಹಶೀಲ್ದಾರ್ ಕಚೇರಿಯಿಂದ ನೋಟೀಸ್ ಜಾರಿಗೊಳಿಸಲಾಗಿದ್ದು, ಸೆ.4ರಂದು ಅಧಿಕಾರಿಗಳು ಸ್ಥಳಕ್ಕೆ ತೆರಳಿ ಕಟ್ಟಡದ ಬಾಗಿಲಿಗೆ ನೋಟೀಸ್ ಅಂಟಿಸಿದ್ದಾರೆ. ಈ ವೇಳೆ ರಾಜು ಮೇಸ್ತ್ರಿ ಅವರ ಪುತ್ರ ಸುರೇಶ್ ಅವರು ಕಟ್ಟಡವನ್ನು ತಾವೇ ನಿರ್ಮಿಸಿರುವುದಾಗಿ ಲಿಖಿತ ಹೇಳಿಕೆ ನೀಡಿ, ಮೂರು ದಿನಗಳೊಳಗೆ ಕಟ್ಟಡವನ್ನು ಸಂಪೂರ್ಣ ತೆರವುಗೊಳಿಸುವುದಾಗಿ ಭರವಸೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸೋಮವಾರದವರೆಗೆ ಕಾಲಾವಕಾಶ ನೀಡಲಾಗಿದೆ. ನಿಗದಿತ ಅವಧಿಯಲ್ಲಿ ಕಟ್ಟಡ ತೆರವುಗೊಳಿಸದಿದ್ದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಜೆಸಿಬಿ ಮೂಲಕ ಕಟ್ಟಡ ತೆರವುಗೊಳಿಸಿ, ಸರ್ಕಾರಿ ಜಾಗವನ್ನು ಲಾಯಿಲ ಗ್ರಾಮ ಪಂಚಾಯಿತಿಯ ಗ್ರಂಥಾಲಯ ನಿರ್ಮಾಣಕ್ಕಾಗಿ ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಕಂದಾಯ ನಿರೀಕ್ಷಕ ರಾಜು ಲಮಾಣಿ, ಲಾಯಿಲ ಗ್ರಾಮ ಪಂಚಾಯಿತಿ ಪಿಡಿಒ ತಾರಾನಾಥ್ ನಾಯ್ಕ್, ಗ್ರಾಮ ಆಡಳಿತಾಧಿಕಾರಿ ರನಿತಾ, ಗ್ರಾಮ ಸಹಾಯಕ ಸತೀಶ್ ಹಾಗೂ ಪೊಲೀಸರು ಭಾಗವಹಿಸಿದ್ದರು.


