ಉಜಿರೆ: ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಪ್ರೋತ್ಸಾಹಿಸುವ ಉದ್ದೇಶದಿಂದ ಸೇವಾಭಾರತಿ (ರಿ.), ಕನ್ಯಾಡಿ ಇದರ ನೇತೃತ್ವದಲ್ಲಿ ಸಬಲಿನಿ ಯೋಜನೆಯಡಿ ಆಯೋಜಿಸಲಾಗಿದ್ದ 38ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಉಜಿರೆ ಗ್ರಾಮ ಪಂಚಾಯತ್ನ ಸಂಜೀವಿನಿ ಕಟ್ಟಡದಲ್ಲಿ ನಡೆಯಿತು.

ಲಯನ್ಸ್ ಕ್ಲಬ್ ಬೆಳ್ತಂಗಡಿ, ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟ (ರಿ.), ಉಜಿರೆ, ಮಹಾತ್ಮಾ ಗಾಂಧಿ ಗ್ರಾಮ ಪಂಚಾಯತ್, ಉಜಿರೆ ಹಾಗೂ ಶ್ರೀ ದುರ್ಗಾಮಾತೃ ಮಂಡಳಿ, ಕನ್ಯಾಡಿ ಇವುಗಳ ಸಹಭಾಗಿತ್ವದಲ್ಲಿ ಶಿಬಿರ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಒಟ್ಟು 50 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ರಘುರಾಮ ಶೆಟ್ಟಿ ‘ಸಾಧನಾ’ ಮಾತನಾಡಿ, ಶಿಬಿರದಲ್ಲಿ ಕಲಿತ ಕೌಶಲವನ್ನು ಅರ್ಧಕ್ಕೆ ಕೈಬಿಡದೆ ನಿರಂತರ ಅಭ್ಯಾಸದ ಮೂಲಕ ಮುಂದುವರಿಸಿಕೊಂಡು ಹೋಗಬೇಕು ಎಂದು ಶುಭ ಹಾರೈಸಿದರು.
ಕನ್ಯಾಡಿ ಸೇವಾಭಾರತಿಯ ಟ್ರಸ್ಟಿ ಹಾಗೂ ಬೆಳ್ತಂಗಡಿ ತಾಲೂಕು ಮಹಿಳಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವರ್ಣಗೌರಿ ಮಾತನಾಡಿ, ಟೈಲರಿಂಗ್ ಕಲಿಯುವುದರಿಂದ ವಿವಿಧ ಸ್ವ-ಉದ್ಯೋಗದ ಅವಕಾಶಗಳನ್ನು ಪಡೆದುಕೊಳ್ಳಬಹುದು. ಕಲಿತ ವಿದ್ಯೆ ಎಂದಿಗೂ ವ್ಯರ್ಥವಾಗುವುದಿಲ್ಲ.

ಮಹಿಳೆಯರು ಇತರರನ್ನು ಅವಲಂಬಿಸದೆ ಸ್ವಾವಲಂಬಿ ಜೀವನ ನಡೆಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ತರಬೇತಿಯಲ್ಲಿ ಕಲಿತ ಕೌಶಲವನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಕರೆ ನೀಡಿದರು.
ಟೈಲರಿಂಗ್ ತರಬೇತುದಾರರಾದ ಲಲಿತಾ ಶಿಬಿರಾರ್ಥಿಗಳಿಗೆ ಶುಭ ಹಾರೈಸಿ ಸಂತಸ ವ್ಯಕ್ತಪಡಿಸಿದರು. ಅವರ ಸೇವೆಯನ್ನು ಗುರುತಿಸಿ ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಗೌರವಧನ ನೀಡಲಾಯಿತು. ಕ್ಲಬ್ ಅಧ್ಯಕ್ಷ ಲಯನ್ ರಘುರಾಮ ಶೆಟ್ಟಿ ‘ಸಾಧನಾ’ ಅವರು ಗೌರವಧನವನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಬಳಿಕ ತರಬೇತಿ ಪೂರ್ಣಗೊಳಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಉಜಿರೆ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಮಹಾವೀರ ಶೇಬಣ್ಣವರ, ಉಜಿರೆ ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ವಿನುತಾ ರಜತ್ ಗೌಡ, ಎನ್ಆರ್ಎಲ್ಎಂ ಬೆಳ್ತಂಗಡಿ ತಾಲೂಕು ವ್ಯವಸ್ಥಾಪಕಿ ಪ್ರತಿಮಾ ಹಾಗೂ ಕನ್ಯಾಡಿ ಶ್ರೀ ದುರ್ಗಾಮಾತೃ ಮಂಡಳಿ ಅಧ್ಯಕ್ಷೆ ಮಮತಾ ಬಿ. ಉಪಸ್ಥಿತರಿದ್ದರು.
ಬೆಳ್ತಂಗಡಿ ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟದ ಶಾಶ್ವಿತ ಸ್ವಾಗತಿಸಿದರು. ಸಂಧ್ಯಾ ಎಂ.ಬಿ.ಕೆ. ಕಾರ್ಯಕ್ರಮ ನಿರೂಪಿಸಿದರು. ಭಾಗೀರಥಿ ವಂದಿಸಿದರು.


