Breaking
5 Sep 2026, Sat

ಮಂಜೇಶ್ವರ: ಕರ್ನಾಟಕ ಮೂಲದ ವ್ಯಕ್ತಿ ಅನುಮಾನಾಸ್ಪದ ಸಾವು; ಕೊಲೆ ಶಂಕೆ

ಕಾಸರಗೋಡು: ಕರ್ನಾಟಕ ಮೂಲದ 42 ವರ್ಷದ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸಮೀಪದ ಹೊಸಂಗಡಿಯಲ್ಲಿ ನಡೆದಿದೆ.


ಮೃತರನ್ನು ರಮೇಶ್ ಎಂದು ಗುರುತಿಸಲಾಗಿದೆ. ಹೊಸಂಗಡಿಯ ಹಳೆಯ ಮನೆಯೊಂದರಲ್ಲಿ ಶುಕ್ರವಾರ ರಾತ್ರಿ ರಮೇಶ್ ಅವರ ಮೃತದೇಹ ಪತ್ತೆಯಾಗಿದ್ದು, ತಲೆಗೆ ಗಂಭೀರ ಗಾಯವಾಗಿರುವುದು ಬೆಳಕಿಗೆ ಬಂದಿದೆ.
ದಿನಗೂಲಿ ಕೆಲಸ ಮುಗಿಸಿ ಕ್ವಾರ್ಟರ್ಸ್ಗೆ ವಾಪಸ್ ಬಂದ ಸಹ ಕಾರ್ಮಿಕರು ರಮೇಶ್ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರಮೇಶ್ ಈ ಕ್ವಾರ್ಟರ್ಸ್ನಲ್ಲಿ ಶಾಶ್ವತವಾಗಿ ವಾಸಿಸುತ್ತಿರಲಿಲ್ಲ ಎನ್ನಲಾಗಿದೆ.


ಮದ್ಯಪಾನದ ವೇಳೆ ನಡೆದ ಜಗಳದ ಬಳಿಕ ಈ ಘಟನೆ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ತಲೆಗೆ ಗಂಭೀರ ಗಾಯವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಕೊಲೆ ಪ್ರಕರಣದ ಸಾಧ್ಯತೆಯನ್ನೂ ಪರಿಶೀಲಿಸುತ್ತಿದ್ದಾರೆ.


ಇನ್ನು ಘಟನೆ ನಡೆದ ಸ್ಥಳದಿಂದ ಇಬ್ಬರು ವ್ಯಕ್ತಿಗಳು ಪರಾರಿಯಾಗಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ ಎನ್ನಲಾಗಿದ್ದು, ಅವರಿಗಾಗಿ ಮಂಜೇಶ್ವರ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಹಾಗೂ ತನಿಖೆ ಪೂರ್ಣಗೊಂಡ ನಂತರವೇ ರಮೇಶ್ ಅವರ ಸಾವಿನ ನಿಖರ ಕಾರಣ ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *