Breaking
5 Sep 2026, Sat

ಬೆಳ್ತಂಗಡಿ: ನಾವೂರು–ಕುತ್ಲೂರಿಗೆ ವಿದ್ಯುತ್ ಸಂಪರ್ಕ; ಅನುಮೋದನೆಗೆ ರಕ್ಷಿತ್ ಶಿವರಾಂ ನೇತೃತ್ವದ ಪ್ರಯತ್ನ ಕಾರಣ: ಶೇಖರ್ ಲಾಯಿಲ

ಬೆಳ್ತಂಗಡಿ: ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ನಾವೂರು ಹಾಗೂ ಕುತ್ಲೂರು ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಕೇಂದ್ರ ವನ್ಯಜೀವಿ ಮಂಡಳಿಯಿಂದ ಅನುಮೋದನೆ ದೊರೆತಿದ್ದು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರ ನೇತೃತ್ವದಲ್ಲಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಹಾಗೂ ಸ್ಥಳೀಯರು ನಡೆಸಿದ ನಿರಂತರ ಪ್ರಯತ್ನದ ಫಲವಾಗಿದೆ ಎಂದು ಸಮಿತಿಯ ಸಂಚಾಲಕ ಶೇಖರ್ ಲಾಯಿಲ ಹೇಳಿದರು.

ಬೆಳ್ತಂಗಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2024ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದಿವಾಸಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ನಡೆಸಿದ ಸಭೆಯ ಬಳಿಕ 2025ರಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲಾಗಿತ್ತು.

ಇದರ ಮುಂದುವರಿದ ಭಾಗವಾಗಿ ಅನುಮೋದನೆ ದೊರೆಯಲು ರಕ್ಷಿತ್ ಶಿವರಾಂ ಅವರು ನಿರಂತರವಾಗಿ ಪ್ರಯತ್ನಿಸಿದ್ದು, ಇದೀಗ ಕೇಂದ್ರ ವನ್ಯಜೀವಿ ಮಂಡಳಿಯ ಅನುಮೋದನೆ ಲಭಿಸಿದೆ ಎಂದು ತಿಳಿಸಿದರು.

ವಿದ್ಯುತ್ ಸಂಪರ್ಕ ಕಾಮಗಾರಿಗೆ ಅಗತ್ಯ ಅನುದಾನ ಒದಗಿಸುವಂತೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದ್ದು, ಅನುದಾನ ಮೀಸಲಿಡುವ ಭರವಸೆ ದೊರೆತಿದೆ ಎಂದರು.

ಸುಲ್ಕೇರಿ–ಮೊಗ್ರು ಗ್ರಾಮದ ಮಾಳಿಗೆ ಪ್ರದೇಶದ ಜನರಿಗೂ ವಿದ್ಯುತ್ ಸಂಪರ್ಕಕ್ಕೆ ಅಂತಿಮ ಅನುಮೋದನೆ ದೊರೆತು ಈಗಾಗಲೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಶೇಖರ್ ಲಾಯಿಲ ತಿಳಿಸಿದರು.

ನಾವೂರು ಹಾಗೂ ಕುತ್ಲೂರು ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ರಕ್ರಿಯೆಗೆ ಇದೀಗ ಶಾಸಕ ಹರೀಶ್ ಪೂಂಜ ಅವರು ತಾವೇ ಕಾರಣವೆಂಬ ರೀತಿಯಲ್ಲಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಶೇಖರ್ ಲಾಯಿಲ ಆರೋಪಿಸಿದರು.

2019ರಿಂದ 2023ರವರೆಗೆ ಹರೀಶ್ ಪೂಂಜ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇತ್ತು. ಗ್ರಾಮ ಪಂಚಾಯತ್‌ನಿಂದ ಹಿಡಿದು ಹಲವು ಹಂತಗಳಲ್ಲಿ ಬಿಜೆಪಿ ಜನಪ್ರತಿನಿಧಿಗಳೇ ಇದ್ದರು.

ಆ ಸಂದರ್ಭದಲ್ಲಿ ಆದಿವಾಸಿ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕನಿಷ್ಠ ಅರ್ಜಿಯನ್ನಾದರೂ ಸಲ್ಲಿಸಬಹುದಿತ್ತಲ್ಲವೇ ಎಂದು ಪ್ರಶ್ನಿಸಿದ ಅವರು, ಇದೀಗ ಅನುಮೋದನೆ ದೊರೆತ ಬಳಿಕ ತಾವೇ ಮಾಡಿಸಿರುವುದಾಗಿ ಹೇಳಿಕೊಳ್ಳುವುದು ಸರಿಯಲ್ಲ ಎಂದರು.

ಆದಿವಾಸಿ ಕುಟುಂಬಗಳಿಗೆ ವಿದ್ಯುತ್ ಒದಗಿಸುವ ನಿಟ್ಟಿನಲ್ಲಿ ಶಾಸಕರಿಗೆ ನಿಜವಾದ ಆಸಕ್ತಿ ಇದ್ದರೆ ಹಿಂದೆಯೇ ಈ ಬಗ್ಗೆ ಕ್ರಮ ಕೈಗೊಳ್ಳಬಹುದಿತ್ತು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ ಹಾಗೂ ಜಯರಾಮ ಮಾತನಾಡಿ, ಆದಿವಾಸಿಗಳ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ಮಹತ್ವದ ನಿರ್ಧಾರ ಕೈಗೊಂಡ ಸರ್ಕಾರ ಹಾಗೂ ಇದಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಮಲೆಕುಡಿಯ ಸಮುದಾಯದ ಮುಖಂಡರಾದ ಪೂವಪ್ಪ ಮಲೆಕುಡಿಯ, ಸುಧಾಕರ ಮಲೆಕುಡಿಯ, ಜಯಂತ ಮಲೆಕುಡಿಯ, ನವೀನ್ ಮಲೆಕುಡಿಯ, ಪುಷ್ಪ ಕಾಟಾಜೆ, ಸುಕುಮಾರ್ ದಿಡುಪೆ, ಅವಿನಾಶ್ ನಾವೂರು, ಸದಾಶಿವ ಎರ್ಮೆಲೆ, ಅಶೋಕ್ ಎರ್ಮೆಲೆ, ಚೀಂಕ್ರ ಮಲೆಕುಡಿಯ ಕುತ್ಲೂರು ಸೇರಿದಂತೆ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *