Breaking
6 Sep 2026, Sun

ಲೇಡಿಗೋಷನ್ ಆಸ್ಪತ್ರೆಗೆ ರೆಡ್ ಕ್ರಾಸ್ ಸೊಸೈಟಿ ವತಿಯಿಂದ ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳ ವಿತರಣೆ

ಮಂಗಳೂರು: ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ವತಿಯಿಂದ ನಗರದ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಗೆ ಮೂರು ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳನ್ನು ವಿಶೇಷ ಕೊಡುಗೆಯಾಗಿ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ದುರ್ಗಾಪ್ರಸಾದ್ ಎಂ.ಆರ್. ಅವರು ಮಾತನಾಡಿ, ಇದೊಂದು ಕ್ರಿಯಾತ್ಮಕ ದೃಷ್ಟಿಕೋನದ ವೈಶಿಷ್ಟ್ಯಪೂರ್ಣ ಕೊಡುಗೆ ಎಂದು ಬಣ್ಣಿಸಿದರು. ಆಸ್ಪತ್ರೆಯ ರೋಗಿಗಳು, ವೈದ್ಯರು ಹಾಗೂ ಶುಶ್ರೂಷಕಿಯರಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸಾ ಬಟ್ಟೆಗಳಲ್ಲಿ ಯಾವುದೇ ನ್ಯೂನತೆಗಳು ಕಂಡುಬಂದಾಗ, ಅವುಗಳನ್ನು ಸರಿಪಡಿಸಿ ಸುಸ್ಥಿತಿಯಲ್ಲಿ ಮರುಬಳಕೆ ಮಾಡಲು ಈ ಹೊಲಿಗೆ ಯಂತ್ರಗಳು ಬಹಳಷ್ಟು ಸಹಕಾರಿಯಾಗಲಿವೆ ಎಂದು ತಿಳಿಸಿದರು. ರೆಡ್ ಕ್ರಾಸ್ ಸಂಸ್ಥೆಯ ಈ ಕೊಡುಗೆ ಮಹೋನ್ನತ ಧ್ಯೇಯೋದ್ದೇಶವನ್ನು ಹೊಂದಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದಕ್ಷಿಣ ಕನ್ನಡ ಜಿಲ್ಲಾ ರೆಡ್ ಕ್ರಾಸ್ ಸೊಸೈಟಿಯ ಮುಖ್ಯಸ್ಥರಾದ ಸಿ.ಎ. ಶಾಂತಾರಾಮ ಶೆಟ್ಟಿ ಅವರು ಮಾತನಾಡಿ, ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯ ದೂರಗಾಮಿ ಪರಿಣಾಮ ಉಳ್ಳ ಇಂತಹ ಯೋಜನೆಗಳಿಗೆ ಪೂರಕವಾಗಿ ಸ್ಪಂದಿಸಲು ರೆಡ್ ಕ್ರಾಸ್ ಸಂಸ್ಥೆ ಹೆಮ್ಮೆಪಡುತ್ತದೆ ಎಂದರು. ಅಲ್ಲದೆ, ಸರ್ಕಾರದ ಆರ್ಥಿಕ ಸಂಪನ್ಮೂಲವನ್ನು ಸಬಲೀಕರಣಗೊಳಿಸಲು ಈ ಕೊಡುಗೆ ಪರೋಕ್ಷವಾಗಿ ಸಹಕಾರಿಯಾಗಲಿದೆ ಎಂದು ಹೇಳಿದರು.

ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳನ್ನು ಶಸ್ತ್ರಚಿಕಿತ್ಸಾ ವಿಭಾಗ, ಹೆರಿಗೆ ವಿಭಾಗ ಹಾಗೂ ನವಜಾತ ಶಿಶು ತೀವ್ರ ನಿಗಾ ಘಟಕಗಳಿಗೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸೆಕ್ರೆಟರಿ ಡಾ. ಸತೀಶ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಶ್ರೀ ಗುರುದತ್ತ್, ಕೋ-ಆರ್ಡಿನೇಟರ್ ಶ್ರೀ ಗಿರೀಶ್, ನಿವಾಸಿ ವೈದ್ಯಾಧಿಕಾರಿ ಡಾ. ಜಗದೀಶ್, ಹಿರಿಯ ತಜ್ಞ ಡಾ. ದಯಾನಂದ್, ನರ್ಸಿಂಗ್ ಸೂಪರಿಂಟೆಂಡೆಂಟ್ ಶ್ರೀಮತಿ ಗೀತಾ ಹಾಗೂ ಶ್ರೀಮತಿ ಮಲ್ಲಿಕಾ ಉಪಸ್ಥಿತರಿದ್ದರು.

ಶ್ರೀಮತಿ ಸಂಧ್ಯಾ ಪ್ರಾರ್ಥಿಸಿದರು. ಶುಶ್ರೂಷಾಧಿಕಾರಿಗಳಾದ ಶ್ರೀಮತಿ ಅಂಬಿಕಾ ಮತ್ತು ಶ್ರೀಮತಿ ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಜ್ಯೋತಿ ಪ್ರಭಾ ಸ್ವಾಗತಿಸಿದರು.

Leave a Reply

Your email address will not be published. Required fields are marked *