Breaking
7 Sep 2026, Mon

ಬೆಳ್ತಂಗಡಿ ಮೂಲದ ಯುವ ವಕೀಲನ ವಿರುದ್ಧ ಬೆಂಗಳೂರಲ್ಲಿ ಪ್ರಕರಣ: ಮಹಿಳೆಗೆ ಹಲ್ಲೆ ಆರೋಪ

ಬೆಳ್ತಂಗಡಿ: ಮಹಿಳೆಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಬಳಿಕ ವಂಚಿಸಿದಲ್ಲದೆ, ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆರೋಪದಡಿ ಬೆಂಗಳೂರಿನಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿರುವ ಬೆಳ್ತಂಗಡಿ ಮೂಲದ ಯುವ ವಕೀಲನ ವಿರುದ್ಧ ಬೆಂಗಳೂರಿನ ಬಾಗಳಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂತ್ರಸ್ತ ಮಹಿಳೆ ನೀಡಿದ ದೂರಿನಂತೆ, ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದ ಕಟ್ಟಿಲ್ಕೊಡಿ ನಿವಾಸಿ, ಬೆಳ್ತಂಗಡಿ, ಬೆಂಗಳೂರು ಹಾಗೂ ಮಂಗಳೂರಿನಲ್ಲಿ ವಕೀಲ ವೃತ್ತಿ ನಡೆಸುತ್ತಿರುವ ಜಿತಿನ್ ಜಿಜೊ (26) ವಿರುದ್ಧ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಬೆಂಗಳೂರು ನಿವಾಸಿಯಾಗಿರುವ 36 ವರ್ಷ ಪ್ರಾಯದ ದೂರುದಾರ ಮಹಿಳೆಗೆ 2021 ರಲ್ಲಿ ಮದುವೆಯಾಗಿದ್ದು, ಮದುವೆಯಾದ ಮೇಲೆ ಪತಿಯ ವರ್ತನೆ ಸರಿ ಹೋಗದ ಕಾರಣ ದೂರುದಾರರು ಅವರ ಗಂಡನ ವಿರುದ್ಧ ಮಾನ್ಯ ನ್ಯಾಯಾಲಯದಲ್ಲಿ ದಾವೇ ಹೂಡಿದ್ದು, ಈ ಸಮಯದಲ್ಲಿ ದೂರುದಾರ ಮಹಿಳೆಗೆ 2025ರ ಫೆಬ್ರವರಿ ತಿಂಗಳಲ್ಲಿ ಯಲಹಂಕದಲ್ಲಿ ವಾಸವಿರುವ ಯುವ ವಕೀಲ ಜಿತಿನ್ ಜಿಜೊ ಅವರ ಪರಿಚಯವಾದ್ದರಿಂದ ದೂರುದಾರ ಮಹಿಳೆ ಅವರ Domestic Violence ಪ್ರಕರಣವನ್ನು ನಡೆಸುತ್ತಿದ್ದ ಕಾರಣ, ಅವರನ್ನು ವಕೀಲರಾಗಿ ನೇಮಿಸಿಕೊಂಡಿದ್ದಾರೆ.

ಆ ಸಮಯದಲ್ಲಿ ಒಬ್ಬರಿಗೊಬ್ಬರು ಪ್ರಕರಣದ ವಿಚಾರವಾಗಿ ಮಾತನಾಡುತ್ತಿದ್ದು ಜಿತಿನ್ ಜಿಜೊಗೆ ದೂರುದಾರ ಮಹಿಳೆ ಮೇಲೆ ಪ್ರೀತಿ ಹುಟ್ಟಿದ್ದರಿಂದ ಈ ವಿಚಾರವನ್ನು ದೂರುದಾರ ಮಹಿಳೆಗೆ ತಿಳಿಸಿದ್ದೇನೆಂದರೆ, “ನನಗೆ ನಿನ್ನ ಮೇಲೆ ಪ್ರೀತಿ ಇದೆ, ನಾನು ನಿನ್ನ ಪ್ರಕರಣವನ್ನು ಬಗೆಹರಿಸಿ ನಿನ್ನ ಗಂಡನಿಂದ ನಿನಗೆ ಮುಕ್ತಿ ನೀಡಿ ನಿನ್ನನ್ನು ಮದುವೆಯಾಗುತ್ತೇನೆ, ನಾನು ನಿನ್ನನ್ನು ಬಿಟ್ಟು ಇರಲು ಆಗುತ್ತಿಲ್ಲಾ ನಾನು ನಿನ್ನನ್ನು ಮದುವೆಯಾಗುತ್ತೇನೆ” ಎಂದು ಹೇಳಿ ತಾನು ಸಹ ಸಂತ್ರಸ್ತ ಮಹಿಳೆ ವಾಸವಾಗಿರುವ ಏರಿಯಾದಲ್ಲಿ ವಾಸವಾಗಿರುತ್ತೇನೆಂದು ತಿಳಿಸಿ ದೂರುದಾರರು ವಾಸವಾಗಿರುವ ಮನೆಯ 3ನೇ ಮಹಡಿಯ ಮನೆಯನ್ನು ಬಾಡಿಗೆ ಪಡೆದುಕೊಂಡು ವಾಸಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ದೂರುದಾರ ಮಹಿಳೆ ಮನೆಯಲ್ಲಿರುವಾಗ ಅವರ ಕೆಲಸವನ್ನು ಮುಗಿಸಿಕೊಂಡು ಆಗಾಗ್ಗೆ ದೂರುದಾರ ಮಹಿಳೆ ವಾಸವಿರುವ ಮನೆಗೆ ಬಂದು ಆ ಸಮಯದಲ್ಲಿ ದೂರುದಾರರು ಬೇಡವೆಂದರೂ ಕೂಡಾ ದೂರುದಾರ ಮಹಿಳೆಯ ಜೊತೆ ಹಲವಾರು ಬಾರಿ ಲೈಗಿಂಕ ಸಂಪರ್ಕ ಬೆಳೆಸಿದ್ದಾನೆ ಎಂದು ಆರೋಪಿಸಲಾಗಿದೆ.

2026ರಲ್ಲಿ ಮಹಿಳೆಗೆ ಪತಿಯಿಂದ ವಿಚ್ಛೇದನ ದೊರೆತ ಬಳಿಕ ಆರೋಪಿ ಆಕೆಯ ಮೇಲೆ ಅನುಮಾನಪಟ್ಟು “ನೀನು ಬೇರೆಯವರ ಜೊತೆ ಸಂಬಂಧ ಇಟ್ಟುಕೊಂಡಿದ್ದೀಯಾ ಅವರ ಜೊತೆ ಇದ್ದೀಯಾ” ಎಂದು ಅವಾಚ್ಯವಾಗಿ ನಿಂದಿಸುತ್ತಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸೆ.2ರಂದು ನಡೆದ ಘಟನೆ: ಆರೋಪಿ ಮಹಿಳೆಯ ಮನೆಗೆ ಬಂದು ಅವರ ಮೊಬೈಲ್ ಪಡೆದುಕೊಂಡು Signal App‌ನಲ್ಲಿದ್ದ ಇಬ್ಬರ ನಡುವಿನ ವೈಯಕ್ತಿಕ ಸಂಭಾಷಣೆಗಳನ್ನು ಅಳಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ದೂರುದಾರ ಮಹಿಳೆ ಪ್ರಶ್ನಿಸಿದಾಗ ಆರೋಪಿ ಹಿಂಸಾತ್ಮಕವಾಗಿ ವರ್ತಿಸಿ, ಕೊಲೆ ಬೆದರಿಕೆ ಹಾಕಿ ಮಹಿಳೆಯ ಬಟ್ಟೆ ಹರಿದು, ಮುಖ, ಎದೆ, ಬೆನ್ನು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಲ್ಲದೆ, ಮಹಿಳೆಯ ಮೈ ಕೈಗೆಲ್ಲಾ ಕಚ್ಚಿ, ಸ್ಟ್ಯಾಂಡ್ ಫ್ಯಾನ್‌ನಿಂದ ಹೊಡೆದು, ವೇಲ್‌ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಮಹಿಳೆ ಆರೋಪಿಯಿಂದ ತಪ್ಪಿಸಿಕೊಂಡು ಅಲ್ಲಿಂದ ಓಡಿ, ಸಮೀಪದ ಎನ್.ಆರ್.ಆರ್. ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

ಈ ದೂರಿನ ಆಧಾರದ ಮೇಲೆ ಸೆ.3ರಂದು ಬಾಗಳಗುಂಟೆ ಪೊಲೀಸ್ ಠಾಣೆಯಲ್ಲಿ BNS-2023ರ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಜಿತಿನ್ ಜಿಜೊ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

Leave a Reply

Your email address will not be published. Required fields are marked *