ಮೊಗ್ರು: ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಜೈ ಶ್ರೀರಾಮ ಸೇವಾ ಟ್ರಸ್ಟ್ (ರಿ.) ಅಲೆಕ್ಕಿ–ಮುಗೇರಡ್ಕ ಇದರ ಶ್ರೀರಾಮ ಶಿಶುಮಂದಿರದಲ್ಲಿ 5ನೇ ವರ್ಷದ ಶ್ರೀಕೃಷ್ಣೋತ್ಸವ ಹಾಗೂ ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಅವರ ಸ್ಮರಣಾರ್ಥ ನಿರ್ಮಿಸಲಾದ ‘ಕಾಶಿ ಶೆಟ್ಟಿ ವಿದ್ಯಾ ಮಂದಿರ’ ಮತ್ತು ಶಾಸಕ ಹರೀಶ್ ಪೂಂಜ ಅವರ ನೆರವಿನಿಂದ ನಿರ್ಮಿಸಲಾದ ಅಡುಗೆ ಕೋಣೆಯ ಉದ್ಘಾಟನಾ ಕಾರ್ಯಕ್ರಮ ಸೆ. 6ರಂದು ನಡೆಯಿತು.

ಸುಮಾರು ರೂ.7 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡವನ್ನು ನವಶಕ್ತಿ ಗುರುವಾಯನಕೆರೆಯ ಶ್ರೀ ಶಶಿಧರ ಶೆಟ್ಟಿ ಉದ್ಘಾಟಿಸಿದರು. ಮಾತನಾಡಿದ ಅವರು, ಶ್ರೀರಾಮ ಶಿಶುಮಂದಿರದ ಧಾರ್ಮಿಕ ಹಾಗೂ ಆಧುನಿಕ ಶಿಕ್ಷಣ ವ್ಯವಸ್ಥೆಯನ್ನು ಶ್ಲಾಘಿಸಿ, ತಮ್ಮ ತಾಯಿ ಕಾಶಿ ಶೆಟ್ಟಿ ಅವರ ಸ್ಮರಣಾರ್ಥ ನೀಡಿದ ನೆರವಿನೊಂದಿಗೆ ಮುಂದಿನ ಅಭಿವೃದ್ಧಿ ಕಾರ್ಯಗಳಿಗೂ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಮಕ್ಕಳ ಆಟೋಟ ಚಟುವಟಿಕೆಗಳಿಗೆ ಅಗತ್ಯ ವ್ಯವಸ್ಥೆ ಕಲ್ಪಿಸುವುದಾಗಿಯೂ ತಿಳಿಸಿದರು.

ಜೈ ಶ್ರೀರಾಮ ಸೇವಾ ಟ್ರಸ್ಟ್‌ನ ಗೌರವಾಧ್ಯಕ್ಷ ಉದಯ ಭಟ್ ಕೊಳಬ್ಬೆ ಅಧ್ಯಕ್ಷತೆ ವಹಿಸಿದ್ದರು. ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಮುಗೇರಡ್ಕ ಮೂವರು ದೈವಗಳ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಗೌಡ ಅಂತರ, ನಿವೃತ್ತ ಸೈನಿಕ ದೇವಪ್ರಸಾದ್ ಗೌಡ ಬರೆಮೇಲು, ಟ್ರಸ್ಟ್ ಅಧ್ಯಕ್ಷ ಅಶೋಕ ಬರುಂಗುಡೇಲು ಹಾಗೂ ಮಹಿಳಾ ಮಂಡಲ ಅಧ್ಯಕ್ಷೆ ದೇಜಶ್ರೀ ಕೀಲಾರು ಉಪಸ್ಥಿತರಿದ್ದರು.

ದಿವ್ಯಶ್ರೀ ಪದ್ಮುಂಜ ಇವರು ಪ್ರಾರ್ಥನೆಗೈದು, ಶ್ರೀಮತಿ ಪುಷ್ಪಲತಾ ಮಾತಾಜಿ ಸ್ವಾಗತದೊಂದಿಗೆ ಪ್ರಾಸ್ತವಿಕ ಮಾತನಾಡಿದರು. ಶ್ರೀಮತಿ ನವ್ಯಶ್ರೀ ಧನ್ಯವಾದ ಸಲ್ಲಿಸಿ. ಭರತೇಶ್ ಗೌಡ ಪುಣ್ಕೆದಡಿ ಇವರು ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕ ದೇವಪ್ರಸಾದ್ ಗೌಡ ಬರೆಮೇಲು ಅವರನ್ನು ಸನ್ಮಾನಿಸಲಾಯಿತು. ಬೆಳಗ್ಗೆ ಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಆರಂಭಗೊಂಡಿದ್ದು, ಶ್ರೀ ಬಾಲಕೃಷ್ಣ ತೊಟ್ಟಿಲ ಸಂಭ್ರಮ, ಕೃಷ್ಣ–ಬಾಲಕೃಷ್ಣ ವೇಷಧಾರಣೆ, ರಾಧಾಕೃಷ್ಣ ಸ್ಪರ್ಧೆ, ಮಕ್ಕಳ ನೃತ್ಯ ಹಾಗೂ ವೇಷಭೂಷಣ ಸ್ಪರ್ಧೆಗಳು ನಡೆದವು.

ಮಕ್ಕಳು, ಪೋಷಕರು ಹಾಗೂ ಸಾರ್ವಜನಿಕರಿಗೆ ವಿವಿಧ ಮೊಸರು ಕುಡಿಕೆ ಮತ್ತು ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ನೆರೆದವರಿಗೆ ಸಿಹಿ ತಿಂಡಿ ಹಾಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಭಿಮಾನಿಗಳು, ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.




