Breaking
8 Sep 2026, Tue

ಪುತ್ತೂರಿನಲ್ಲಿ ಆಚಾರ್ಯ ಪುರಸ್ಕಾರ, ಕವಿಗೋಷ್ಠಿ : ಸಮಾಜಸೇವೆಯಲ್ಲಿ ತೊಡಗಿರುವ ಹಿರಿಯ ಶಿಕ್ಷಕರನ್ನು ಗೌರವಿಸುವುದು ಪವಿತ್ರ ಕಾರ್ಯ: ಡಾ. ತಾಳ್ತಜೆ ವಸಂತ ಕುಮಾರ್

ಪುತ್ತೂರು: ಶಿಕ್ಷಕ ವೃತ್ತಿ ಉದಾತ್ತ ಹಾಗೂ ಪವಿತ್ರವಾದದ್ದು. ಮಾನವ ಸಂಪನ್ಮೂಲದ ಸೃಜನಶೀಲತೆಯನ್ನು ರೂಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಕ ವೃತ್ತಿಯನ್ನು ಕೇವಲ ಉದ್ಯೋಗವೆಂದು ಪರಿಗಣಿಸದೆ, ಸಮಾಜ ಸೇವೆಯ ಕಾರ್ಯವೆಂದು ಭಾವಿಸಿ ಕರ್ತವ್ಯ ನಿರ್ವಹಿಸಿದಾಗ ಅವರು ನಿಜವಾದ ಆಚಾರ್ಯರಾಗುತ್ತಾರೆ ಎಂದು ಮುಂಬೈ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತ ಕುಮಾರ್ ಹೇಳಿದರು.

ತತ್ವಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕರಿಗೆ ಆದರ್ಶಪ್ರಾಯರಾಗಿದ್ದಾರೆ. ಅವರ ಜನ್ಮದಿನದ ಅಂಗವಾಗಿ ಸಮಾಜ ಹಾಗೂ ರಾಷ್ಟ್ರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹಿರಿಯ ಶಿಕ್ಷಕರನ್ನು ಗೌರವಿಸುವುದು ಪವಿತ್ರ ಕಾರ್ಯವಾಗಿದೆ ಎಂದು ಅವರು ಹೇಳಿದರು.

ಜಿ.ಎಲ್. ಆಚಾರ್ಯ ಸಂಸ್ಮರಣೆಯ ಅಂಗವಾಗಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಪುತ್ತೂರಿನ ಜಿ.ಎಲ್. ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಆಚಾರ್ಯ ಪುರಸ್ಕಾರ ಹಾಗೂ ಆಚಾರ್ಯ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಆಚಾರ್ಯ ಸಂದೇಶ ನೀಡಿ ಅವರು ಮಾತನಾಡಿದರು.

ಜಿ.ಎಲ್. ಸಮೂಹ ಸಂಸ್ಥೆಗಳ ಅಧ್ಯಕ್ಷ ಬಲರಾಮ ಆಚಾರ್ಯ ಮಾತನಾಡಿ, ಜಿ.ಎಲ್. ಆಚಾರ್ಯ ಅವರು ಉದ್ಯಮದ ಜೊತೆಗೆ ಸಮಾಜಸೇವೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿಯೂ ವಿಶೇಷ ಆಸಕ್ತಿ ಹೊಂದಿದ್ದರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತಿಯ ಬಳಿಕವೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ, ನಿವೃತ್ತ ಶಿಕ್ಷಕ ಪೆರಾಜೆ ಸೀತಾರಾಮ ಭಟ್, ನೆಹರು ಮೆಮೋರಿಯಲ್ ಕಾಲೇಜು, ಸುಳ್ಯದ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲ್ ಹಾಗೂ ವಿವೇಕಾನಂದ ಕಾಲೇಜಿನ ನಿವೃತ್ತ ಗಣಿತ ಉಪನ್ಯಾಸಕಿ ಪ್ರೊ. ವತ್ಸಲಾ ರಾಜ್ಞಿ ಅವರನ್ನು ಆಚಾರ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು.

ಜಿ.ಎಲ್. ಆಚಾರ್ಯ ಜ್ಯುವೆಲರ್ಸ್‌ನ ಲಕ್ಷ್ಮೀಕಾಂತ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕರ್ನಾಟಕ ರಾಜ್ಯ ಸಂಚಾಲಕ ಜಯಾನಂದ ಪೆರಾಜೆ ಪ್ರಸ್ತಾವನೆ ಸಲ್ಲಿಸಿದರು. ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಉಪಾಧ್ಯಕ್ಷೆ ಡಾ. ಶಾಂತ ಪುತ್ತೂರು ಉಪಸ್ಥಿತರಿದ್ದರು.

ಶಿಕ್ಷಕ ನಾರಾಯಣ ನಾಯ್ಕ್ ಪುಣಚ ಸ್ವಾಗತಿಸಿದರು. ಶಿಕ್ಷಕಿಯರಾದ ಪೂರ್ಣಿಮಾ ಪೆರ್ಲಂಪಾಡಿ, ಮಲ್ಲಿಕಾ ಜೆ. ರೈ, ನಳಿನಿ ಡಿ., ಡಾ. ಮೈತ್ರಿ ಭಟ್, ಡಾ. ಗೀತಾ ಕುಮಾರಿ ಹಾಗೂ ಹೇಮಲತಾ ಕಜೆಗದ್ದೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು. ಶಿಕ್ಷಕಿ ಯಶುಭ ರೈ ಪ್ರಾರ್ಥಿಸಿದರು. ಶಿಕ್ಷಕಿ ಪುಷ್ಪಲತಾ ಎಂ. ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *