Breaking
8 Sep 2026, Tue

ನಾರಾಯಣ ಗುರುಗಳ ಸರಳತೆ ಹಾಗೂ ಸಮಾನತೆಯ ಸಂದೇಶವೇ ಸಮಾಜದ ಶಕ್ತಿ: ರಾಜೇಶ್ ಬಲ್ಯ

ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಹಮ್ಮಿಕೊಂಡಿರುವ “ಮನೆ ಮನೆಗೆ ಗುರುತತ್ವ ಸಂದೇಶ” ಕಾರ್ಯಕ್ರಮವು ಸೆಪ್ಟೆಂಬರ್ 6 ಭಾನುವಾರ ಕೆದಿಲ ಗ್ರಾಮದ ಗಾಯತ್ರಿ ಮಾಧವ ಸುವರ್ಣ ರವರ ಮನೆಯಲ್ಲಿ ನಡೆಯಿತು. ಜನಾರ್ಧನ ಪೂಜಾರಿ ಕೊಡಂಗೆ ಮತ್ತು ತಂಡದವರ ನೇತೃತ್ವದಲ್ಲಿ ಗುರುಗಳ ಭಕ್ತಿ ಭಾವದೊಂದಿಗೆ ಭಜನೆ ಸಂಕೀರ್ತನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ರಾಜೇಶ್ ಬಲ್ಯ ಅವರು, ಶ್ರೀ ನಾರಾಯಣ ಗುರುಗಳು ಶಿಕ್ಷಣ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆಗೆ ಕಾರಣರಾದರು. ಸರಳತೆ, ಸಮಾನತೆ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ ಗುರುಗಳು ಸಮಾಜದಲ್ಲಿನ ಜಾತಿಭೇದ ಹಾಗೂ ಅಸಮಾನತೆಗಳನ್ನು ದೂರ ಮಾಡಿ, ಮಾನವೀಯ ಮೌಲ್ಯಗಳ ಆಧಾರದ ಮೇಲೆ ಸಮಾಜ ನಿರ್ಮಾಣಕ್ಕೆ ದಾರಿ ತೋರಿದರು. ಕುದ್ರೋಳಿ ಕ್ಷೇತ್ರವೂ ನಾರಾಯಣ ಗುರುಗಳ ತತ್ವ, ಆದರ್ಶ ಮತ್ತು ಸಾಮಾಜಿಕ ಪರಿವರ್ತನೆಯ ಸಂದೇಶವನ್ನು ಸಾರುವ ಪ್ರಮುಖ ಕ್ಷೇತ್ರವಾಗಿದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.), ಕೆದಿಲ ಇದರ ಗೌರವಾಧ್ಯಕ್ಷರಾದ ಮಾರಪ್ಪ ಸುವರ್ಣ ಮಾತನಾಡಿ, ಗುರುಗಳ ಸಂದೇಶವನ್ನು ಮನೆ ಮನೆಗೆ ತಲುಪಿಸುವ ಯುವವಾಹಿನಿಯ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ. ವಿಶ್ವಗುರು ನಾರಾಯಣ ಗುರುಗಳ ತತ್ವ ಹಾಗೂ ಸಂದೇಶಗಳನ್ನು ಸಮಾಜದ ಪ್ರತಿಯೊಂದು ಮನೆಗೂ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷರಾದ ಗಣೇಶ್ ಪೂಜಾರಿ ಕೊಡಾಜೆ ಸ್ವಾಗತಿಸಿ. ನಾರಾಯಣ ಗುರು ತತ್ವ ಸಂದೇಶ ನಿರ್ದೇಶಕರಾದ ಶ್ರೀಧರ ಪೂಜಾರಿ ಮುಜಲ ಅವರು ವಂದಿಸಿದರು. ತ್ರಿವೇಣಿ ರಮೇಶ್ ಅವರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *