Breaking
8 Sep 2026, Tue

ಭಂಡಾರಿಬೆಟ್ಟು: 75ನೇ ವರ್ಷದ ಮೊಸರುಕುಡಿಕೆ ಸಂಭ್ರಮ: ನೂತನ ಶ್ರೀಕೃಷ್ಣ ಭಜನಾ ಮಂದಿರ ನಿರ್ಮಾಣಕ್ಕೆ ಸಿದ್ಧತೆ

ಬಂಟ್ವಾಳ: ಭಂಡಾರಿಬೆಟ್ಟು ಪ್ರದೇಶದಲ್ಲಿ ಸ್ಥಳೀಯ ಹಿರಿಯ ಭಕ್ತರು 74 ವರ್ಷಗಳ ಹಿಂದೆ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆರಂಭಿಸಿದ್ದ ಮೊಸರುಕುಡಿಕೆ ಉತ್ಸವ ಈ ಬಾರಿ 75ನೇ ವರ್ಷದ ಅಮೃತ ಮಹೋತ್ಸವ ಸಂಭ್ರಮದಲ್ಲಿದೆ.


ಈ ಹಿನ್ನೆಲೆಯಲ್ಲಿ ಟ್ರಸ್ಟ್ ಈಗಾಗಲೇ ಖರೀದಿಸಿರುವ 10 ಸೆಂಟ್ಸ್ ಜಮೀನಿನಲ್ಲಿ ಹಿರಿಯ ಹಾಗೂ ಕಿರಿಯ ಭಕ್ತರ ಸಹಕಾರದೊಂದಿಗೆ ನೂತನ ಶ್ರೀಕೃಷ್ಣ ಭಜನಾ ಮಂದಿರ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲು ಸಾಧ್ಯವಾಗಲಿದೆ ಎಂದು ಸ್ವರ್ಣೋದ್ಯಮಿ ಸುನಿಲ್ ಅಪೂರ್ವ ಭಂಡಾರಿಬೆಟ್ಟು ಹೇಳಿದರು.
ಭಂಡಾರಿಬೆಟ್ಟು ಶ್ರೀಕೃಷ್ಣ ಮಂದಿರ ಸೇವಾ ಟ್ರಸ್ಟ್, ಮೊಸರುಕುಡಿಕೆ ಸಮಿತಿ ಹಾಗೂ ಮಾತೃ ಬಳಗದ ವತಿಯಿಂದ ಶನಿವಾರ ಸಂಜೆ ನಡೆದ 75ನೇ ವರ್ಷದ ಮೊಸರುಕುಡಿಕೆ ಉತ್ಸವದ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ರವಿಶಂಕರ ಶೆಟ್ಟಿ ಬಡಾಜೆ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಸಮಾಜದ ವಿವಿಧ ಹಬ್ಬ-ಹರಿದಿನಗಳ ಆಚರಣೆಯಲ್ಲಿ ಸರ್ವಧರ್ಮೀಯರು ಪಾಲ್ಗೊಳ್ಳುವ ತೌಳವ ಸಂಸ್ಕೃತಿ ಇದೆ ಎಂದರು.
ಕಾರ್ಯಕ್ರಮದ ವೇಳೆ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ಸ್ಥಳೀಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.


ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ರವಿಚಂದ್ರ ಬಂಟ್ವಾಳ, ಉದ್ಯಮಿ ರಾಧಾಕೃಷ್ಣ ಮೈಸೂರು ಹಾಗೂ ಉಪನ್ಯಾಸಕ ಶ್ಯಾಮ್ ಪ್ರಸಾದ್ ಎಸ್. ವಳಚ್ಚಿಲ್ ಶುಭ ಹಾರೈಸಿದರು. ಮೊಸರುಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ದಯಾನಂದ ಗೌಡ, ಮಾತೃ ಬಳಗದ ಅಧ್ಯಕ್ಷೆ ತುಳಸಿ ಆರ್. ಮತ್ತಿತರರು ಉಪಸ್ಥಿತರಿದ್ದರು.
ಟ್ರಸ್ಟ್ ಅಧ್ಯಕ್ಷ ನಾರಾಯಣ ಮೂಲ್ಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಘುನಾಥ ಸಾಲ್ಯಾನ್ ವಂದಿಸಿದರು. ದಿನೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *