Breaking
10 Jul 2026, Fri

ಬೆಳ್ತಂಗಡಿ ಸರಣಿ ಕಳ್ಳತನ ಪ್ರಕರಣ: ಅಂತರಾಜ್ಯ ಕುಖ್ಯಾತ ಕಳ್ಳ ಬಂಧನ, 16 ಪ್ರಕರಣಗಳ ಆರೋಪಿ ಬಲೆಗೆ

ಬೆಳ್ತಂಗಡಿ: ಮೇ 19ರಂದು ಬೆಳ್ತಂಗಡಿ ಪೇಟೆಯಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರಾಜ್ಯ ಕುಖ್ಯಾತ ಕಳ್ಳನನ್ನು ಬೆಳ್ತಂಗಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಬಂಧಿತ ಆರೋಪಿಯನ್ನು ತಮಿಳುನಾಡಿನ ಕೊಯಮತ್ತೂರಿನ ಜಯಕುಮಾರ್ (55) ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ಈತ ಬೆಳ್ತಂಗಡಿ ಮಾತ್ರವಲ್ಲದೆ ಉಪ್ಪಿನಂಗಡಿ ಹಾಗೂ ಸುರತ್ಕಲ್ ವ್ಯಾಪ್ತಿಯಲ್ಲೂ ಸರಣಿ ಕಳ್ಳತನ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ.


ಜುಲೈ 8ರಂದು ಸಂಜೆ ಸುಮಾರು 6 ಗಂಟೆಗೆ ಗುರುವಾಯನಕೆರೆ ಜಂಕ್ಷನ್ ಬಳಿ ವ್ಯಕ್ತಿಯೊಬ್ಬ ಸಂಶಯಾಸ್ಪದವಾಗಿ ಓಡಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಬೆಳ್ತಂಗಡಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಿಕಂದರ್ ಪಾಷಾ ನೇತೃತ್ವದ ತಂಡವು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತು. ಈ ವೇಳೆ ಆತ ಒಟ್ಟು ಆರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಬಾಯಿಬಿಟ್ಟಿದ್ದಾನೆ.


ಪೊಲೀಸರ ಮಾಹಿತಿ ಪ್ರಕಾರ, ಜಯಕುಮಾರ್ ವಿರುದ್ಧ ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಒಟ್ಟು 16 ಕಳ್ಳತನ ಪ್ರಕರಣಗಳು ದಾಖಲಾಗಿವೆ.
ಈ ಕಾರ್ಯಾಚರಣೆಯನ್ನು ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿಣಿ ಸಿ.ಕೆ. ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ರವಿ ಬಿ.ಎಸ್., ಸಬ್ ಇನ್ಸ್ಪೆಕ್ಟರ್ ಆನಂದ್ ಎಂ., ಸಬ್ ಇನ್ಸ್ಪೆಕ್ಟರ್ ಸಿಕಂದರ್ ಪಾಷಾ ಹಾಗೂ ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿ ನಡೆಸಿದ್ದಾರೆ.

Leave a Reply

Your email address will not be published. Required fields are marked *